ಇಬ್ಬರು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗಳು ಲೋಕಾಯುಕ್ತ ಬಲೆಗೆ

ಚಾಮರಾಜನಗರ: ಸರಕಾರಿ ಶಾಲಾ ಕಟ್ಟಡದ ಕಾಮಗಾರಿಯ ಬಿಲ್ ಮಂಜೂರಾತಿಗಾಗಿ ಗುತ್ತಿಗೆದಾರನಿಂದ 30 ಸಾವಿರ ರೂ.ಲಂಚ ಪಡೆಯುತ್ತಿದ್ದಾಗ ಲೋಕೋಪಯೋಗಿ ಇಲಾಖೆಯ ಇಬ್ಬರು ಇಂಜಿನಿಯರ್‌ಗಳನ್ನು ಶುಕ್ರವಾರ ಲೋಕಾಯುಕ್ತ ಪೊಲೀಸರು ಬಂಧಿಸಿರುವುದು ವರದಿಯಾಗಿದೆ.
ಇಲಾಖೆಯ ಚಾಮರಾಜನಗರ ತಾಲೂಕಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೆಂಪರಾಜು ಮತ್ತು ಕಿರಿಯ ಇಂಜಿನಿಯ ಮಧುಸೂದನ್ ಬಂಧಿತರು ಎಂದು ಗುರುತಿಸಲಾಗಿದೆ. ಲೋಕಾಯುಕ್ತ ಪೊಲೀಸರು ಹಣವನ್ನು ವಶಕ್ಕೆ ಪಡೆದುಕೊಂಡು ಇಬ್ಬರನ್ನೂ ಬಂಧಿಸಿದ್ದಾರೆ.
ನಗರದ ಸೂರ್ಯ ಬಿಲ್ಡ ಆ್ಯಂಡ್ ಡೆವೆಲಪರ್ ಸಂಸ್ಥೆಯು ತಾಲೂಕಿನ ಬಾಗಳಿ ಗ್ರಾಮದಲ್ಲಿ ಶಾಲೆ ಕಟ್ಟಡ ನಿರ್ಮಾಣದ ಗುತ್ತಿಗೆ ಪಡೆದುಕೊಂಡಿತ್ತು. ಕಾಮಗಾರಿ ಪೂರ್ಣಗೊಂಡ ಬಳಿಕ ಲೋಕೋಪಯೋಗಿ ಇಲಾಖೆಯು ಬಿಲ್ ಹಣ ಮಂಜೂರು ಮಾಡಬೇಕಿತ್ತು.
'ಬಿಲ್ ಪಾವತಿಗಾಗಿ ಇಬ್ಬರೂ ಇಂಜಿನಿಯರ್‌ಗಳು 30 ಸಾವಿರ ರೂ.ಲಂಚ ಕೇಳಿದ್ದರು. ಈ ಸಂಬಂಧ ಗುತ್ತಿಗೆದಾರ ದೂರು ನೀಡಿದ್ದರು. ಶುಕ್ರವಾರ ಸಂಜೆ ಕಾಮಗಾರಿ ನಡೆದ ಸ್ಥಳದಲ್ಲಿ ಮಧುಸೂದನ್ ಅವರು ಗುತ್ತಿಗೆದಾರನಿಂದ 30 ಸಾವಿರ ರೂ.ಲಂಚ ಪಡೆದಿದ್ದಾರೆ. ಅಲ್ಲಿಂದ ಕಾರಿನಲ್ಲಿ ಬರುತ್ತಿದ್ದಾಗ ಕುದೇರು ಚಾಮುಲ್ ಘಟಕದ ಬಳಿ ಅಡ್ಡಗಟ್ಟಿ ವಶಕ್ಕೆ ಪಡೆಯಲಾಗಿದೆ' ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದರು.
ಚಾಮರಾಜನಗರ ಲೋಕಾಯುಕ್ತ ಡಿವೈಎಸ್‌ಪಿ ಕೆ.ಟಿ.ಮ್ಯಾಥ್ಯು ಥಾಮಸ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.