ಅಪಘಾತಕ್ಕೀಡಾದ ರೈಲು ಬೋಗಿಯಲ್ಲಿ ದುರ್ವಾಸನೆಗೆ ಮೊಟ್ಟೆ ಕಾರಣ, ಹೊರತು ಮೃತದೇಹಗಳಲ್ಲ: ರೈಲ್ವೆ ಇಲಾಖೆ

ಭುವನೇಶ್ವರ: ಜೂನ್ 2ರಂದು ಒಡಿಶಾದಲ್ಲಿ ಸಂಭವಿಸಿದ ತ್ರಿವಳಿ ರೈಲು ಅಪಘಾತದಲ್ಲಿ ಸಾವಿಗೀಡಾಗಿರುವ ಕೆಲವರ ಮೃತದೇಹಗಳು ಇನ್ನೂ ಯಶವಂತಪುರ-ಹೌರಾ ರೈಲು ಬೋಗಿಗಳಲ್ಲೇ ಇವೆ ಎಂಬ ಭಾರಿ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಸ್ಪಷ್ಟನೆ ನೀಡಿರುವ ರೈಲ್ವೆ ಅಧಿಕಾರಿಯೊಬ್ಬರು, ಬೋಗಿಗಳಲ್ಲಿರುವುದು ಕೊಳೆತ ಮೊಟ್ಟೆಗಳೇ ಹೊರತು ಯಾವುದೇ ಮೃತದೇಹ ಉಳಿದಿಲ್ಲ ಎಂದು ಹೇಳಿದ್ದಾರೆ.
288 ಮಂದಿಯ ಸಾವಿಗೆ ಕಾರಣವಾಗಿದ್ದ ರೈಲು ಅಪಘಾತ ಸಂಭವಿಸಿದ ಬಹನಾಗಾ ಬಝಾರ್ ರೈಲ್ವೆ ನಿಲ್ದಾಣದ ಬಳಿ ವಾಸಿಸುತ್ತಿರುವ ಗ್ರಾಮಸ್ಥರು, ಅಪಘಾತದ ಸ್ಥಳದಲ್ಲಿ ಉಳಿದಿರುವ ಬೋಗಿಯಿಂದ ದುರ್ವಾಸನೆ ಬರುತ್ತಿದ್ದು, ಕೆಲವು ಮೃತದೇಹಗಳು ಇನ್ನೂ ಬೋಗಿಯಲ್ಲೇ ಉಳಿದಿರಬಹುದು ಎಂದು ದೂರಿದ್ದರು. ಆ ದೂರನ್ನು ಆಧರಿಸಿ ರಾಜ್ಯ ಸರ್ಕಾರದ ನೆರವಿನೊಂದಿಗೆ ರೈಲ್ವೆ ಇಲಾಖೆಯು ತಪಾಸಣಾ ಕಾರ್ಯ ಕೈಗೊಂಡಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಪೂರ್ವ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಆದಿತ್ಯ ಕುಮಾರ್ ಚೌಧರಿ, "ರೈಲ್ವೆ ನಿಲ್ದಾಣದಲ್ಲಿನ ದುರ್ವಾಸನೆಗೆ ಕೊಳೆತ ಮೊಟ್ಟೆಗಳು ಕಾರಣವೇ ಹೊರತು ಮನುಷ್ಯರ ಮೃತದೇಹಗಳಲ್ಲ. ನಾವು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದಿಂದ ಎರಡು ಬಾರಿ ಸ್ಥಳ ದೃಢೀಕರಣ ಪಡೆದಿದ್ದೇವೆ" ಎಂದು ಸ್ಪಷ್ಟಪಡಿಸಿದ್ದಾರೆ.
ಯಶವಂತಪುರ-ಹೌರಾ ಎಕ್ಸ್ಪ್ರೆಸ್ನ ಪಾರ್ಸೆಲ್ ವಾಹನದಲ್ಲಿ ಸುಮಾರು ಮೂರು ಟನ್ ಮೊಟ್ಟೆಯನ್ನು ಸಾಗಿಸಲಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.
"ಎಲ್ಲ ಮೊಟ್ಟೆಗಳು ಕೊಳೆಯುತ್ತಿದ್ದು, ಅದರಿಂದ ದುರ್ವಾಸನೆ ಬರುತ್ತಿದೆ. ಅಪಘಾತದ ಸ್ಥಳದಿಂದ ಮೂರು ಟ್ರ್ಯಾಕ್ಟರ್ಗಳಲ್ಲಿ ಆ ಮೊಟ್ಟೆಗಳನ್ನು ಹೊರ ತೆಗೆದು ಸಾಗಿಸಲಾಗಿದೆ" ಎಂದು ಚೌಧರಿ ಹೇಳಿದ್ದಾರೆ.
ಈ ನಡುವೆ, ಅಪಘಾತದಲ್ಲಿ ಸಂತ್ರಸ್ತರಾಗಿರುವ 661 ಮಂದಿಯ ಕುಟುಂಬಗಳಿಗೆ ಈವರೆಗೆ ರೂ. 22.66 ಕೋಟಿ ಮೊತ್ತದ ಪರಿಹಾರವನ್ನು ವಿತರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಮೃತಪಟ್ಟ ವ್ಯಕ್ತಿಗಳ ತಕ್ಷಣದ ವಾರಸುದಾರರು ಹಾಗೂ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವವರು ಪರಿಹಾರ ಮೊತ್ತವನ್ನು ಪಡೆದುಕೊಂಡಿದ್ದಾರೆ.
ಅಪಘಾತದಲ್ಲಿ ಸಾವಿಗೀಡಾಗಿರುವ ವ್ಯಕ್ತಿಗಳ ಕುಟುಂಬಗಳಿಗೆ ರೈಲ್ವೆ ಇಲಾಖೆಯು ತಲಾ ರೂ. 10 ಲಕ್ಷ ಪರಿಹಾರ ನೀಡಲಿದೆ ಎಂದು ಚೌಧರಿ ತಿಳಿಸಿದ್ದಾರೆ. ಈ ದುರಂತದಲ್ಲಿ ಸುಮಾರು 1200 ಮಂದಿ ಗಾಯಾಳುಗಳಾಗಿದ್ದಾರೆ.