ಮಂಗಳೂರು: ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯಕ್ರಮ

ಮಂಗಳೂರು : ಅಪಘಾತ, ಅನಾರೋಗ್ಯ ಸಹಿತ ವಿಪತ್ತು ಸಂದರ್ಭ ಸಕಾಲದಲ್ಲಿ ಪ್ರಥಮ ಚಿಕಿತ್ಸೆ ನೀಡಿದರೆ ಜೀವ ಉಳಿಸಲು ಸಾಧ್ಯವಿದೆ. ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿ ವರ್ಗವು ಪ್ರಥಮ ಚಿಕಿತ್ಸೆ ಬಗ್ಗೆ ಅರಿವು ಹೊಂದಿರುವುದು ಅಗತ್ಯ. ಇದರಿಂದ ರೋಗಿಗೆ ತಕ್ಷಣದ ವೈದ್ಯಕೀಯ ಆರೈಕೆ ನೀಡಬಹುದಾಗಿದೆ ಎಂದು ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಅಧ್ಯಕ್ಷ ಶಾಂತರಾಮ ಶೆಟ್ಟಿ ಹೇಳಿದರು.
ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕ ಮತ್ತು ಜಿಲ್ಲಾ ವೆನ್ಲಾಕ್ ಆಸ್ಪತ್ರೆ ವತಿಯಿಂದ ಪಾರಾ ಮೆಡಿಕಲ್ ಹಾಗೂ ಅಲೈಡ್ ಸೈನ್ಸ್‌ಸ್ ವಿದ್ಯಾರ್ಥಿಗಳಿಗೆ ವೆನ್ಲಾಕ್‌ನ ಆರ್‌ಎಪಿಸಿಸಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಕ್ತದಾನ, ಅಂಗಾಂಗ ದಾನದ ಬಗ್ಗೆ ಅರಿವು, ಪ್ರಥಮ ಚಿಕಿತ್ಸೆ ಮಾಹಿತಿ ಮುಂತಾದ ಉಪಯುಕ್ತ ಕಾರ್ಯಕ್ರಮ ಗಳನ್ನು ಆಯೋಜಿಸುವ ಮೂಲಕ ರೆಡ್‌ಕ್ರಾಸ್ ಸಂಸ್ಥೆ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದು ಶಾಂತಾರಾಮ ಶೆಟ್ಟಿ ನುಡಿದರು.
ವೆನ್ಲಾಕ್ ಆಸ್ಪತ್ರೆಯ ಆರ್‌ಎಂಒ ಡಾ.ಸುಧಾಕರ.ಟಿ. ಕಾರ್ಯಕ್ರಮ ಉದ್ಘಾಟಿಸಿದರು. ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಖಜಾಂಜಿ ಮೋಹನ್ ಶೆಟ್ಟಿ, ಉಪ ಸಮಿತಿ ಚೇರ್ಮನ್‌ಗಳಾದ ಡಾ.ಬಿ.ಸಚ್ಚಿದಾನಂದ ರೈ, ಡಾ.ಕೆ.ಆರ್.ಕಾಮತ್, ಪಿ.ಬಿ.ಹರಿಪ್ರಸಾದ್ ರೈ ಅತಿಥಿಗಳಾಗಿ ಭಾಗವಹಿಸಿದ್ದರು.
ಯೂತ್ ರೆಡ್‌ಕ್ರಾಸ್‌ನ ನಿರ್ದೇಶಕ ಸಚೇತ್ ಸುವರ್ಣ, ಯೆನೆಪೊಯ ಡೀಮ್ಡ್ ವಿ.ವಿ.ಯ ನೋಡಲ್ ಅಧಿಕಾರಿ ನಿತ್ಯಶ್ರೀ ಬಿ.ವಿ., ಯೋಜನಾಧಿಕಾರಿ ಜ್ಯೋತಿ ತರಬೇತಿ ನೀಡಿದರು. ರೆಡ್‌ಕ್ರಾಸ್ ಸೊಸೈಟಿಯ ಕಾರ್ಯದರ್ಶಿ ಸಂಜಯ ಶೆಟ್ಟಿ ಸ್ವಾಗತಿಸಿದರು. ಆದ್ಯಾ ಮತ್ತು ಸಮೀಕ್ಷಾ ಕಾರ್ಯಕ್ರಮ ನಿರೂಪಿಸಿದರು.