ಕಾಂಗ್ರೆಸ್ ಸರಕಾರದ 'ಶಕ್ತಿ' ಯೋಜನೆಗೆ ಶೋಭಾ ಕರಂದ್ಲಾಜೆ ಮೆಚ್ಚುಗೆ

ಚಿಕ್ಕಮಗಳೂರು: ಕರ್ನಾಟಕ ರಾಜ್ಯ ಸರ್ಕಾರದ 5 ಗ್ಯಾರಂಟಿಗಳ ಜಾರಿಗೆ ಪ್ರಾದೇಶಿಕವಾರು ಚಾಲನೆ ನೀಡಲು ಸರ್ಕಾರ ನಿರ್ಧಾರ ಮಾಡಿದೆ. ಅದರಂತೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ 'ಶಕ್ತಿ' ಯೋಜನೆಗೆ ನಾಳೆ(ಜೂ.11) ಮುಖ್ಯಮಂತ್ರಿಗಳಿಂದ ಚಾಲನೆ ದೊರಕಲಿದೆ.
ಈ ನಡುವೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು 'ಶಕ್ತಿ' ಯೋಜನೆ ಬಗ್ಗೆ ಪ್ರತಿಕ್ರಿಯಿಸಿ, ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಚಿಕ್ಕಮಗಳೂರು ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ರಾಜ್ಯ ಸರಕಾರ ಹೆಣ್ಣುಮಕ್ಕಳಿಗೆ ಕೊಟ್ಟಿರುವ 'ಶಕ್ತಿ' ಯೋಜನೆಯಿಂದ ನನಗೆ ಖುಷಿಯಾಗಿದೆ, ಹೆಣ್ಮಕ್ಕಳಿಗೂ ಬಸ್ಸಿನಲ್ಲಿ ಪ್ರವಾಸ ಮಾಡಬಹುದು, ಬೇರೆ ಕಡೆ ಹೋಗಬಹುದು ''ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿರೋಧಿಗಳೂ ವಿರೋಧಿಸಲಾಗದೆ ಮೆಚ್ಚಲೇಬೇಕು: ಕಾಂಗ್ರೆಸ್ ಪ್ರತಿಕ್ರಿಯೆ
''ಕಾಂಗ್ರೆಸ್ ಯೋಜನೆಗಳೇ ಹಾಗೆ, ವಿರೋಧಿಗಳೂ ವಿರೋಧಿಸಲಾಗದೆ ಮೆಚ್ಚಲೇಬೇಕು. ಉಚಿತ ಪ್ರಯಾಣದ ಮೂಲಕ ನಾಡಿನ ಹೆಣ್ಣುಮಕ್ಕಳ ಸ್ವಾವಲಂಬನೆ ಹಾಗೂ ಸ್ವಾಭಿಮಾನದ ಬದುಕಿಗೆ ಅನುಕೂಲ ಮಾಡಿಕೊಡಲಿದೆ ನಮ್ಮ ಸರ್ಕಾರ. ದುಡಿಯುವ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ಈ ಯೋಜನೆಯ ಲಾಭ ಪಡೆಯಲಿದ್ದಾರೆ, ಈ ಮೂಲಕ ಸ್ತ್ರೀ ಸಬಲೀಕರಣದ ಮಹತ್ತರ ಹೆಜ್ಜೆಯಾಗಲಿದೆ'' ಎಂದು ಶೋಭಾ ಕರಂದ್ಲಾಜೆ ಅವರ 'ಶಕ್ತಿ' ಯೋಜನೆ ಕುರಿತ ಹೇಳಿಕೆಗೆ ಕಾಂಗ್ರೆಸ್ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದೆ.