ರಾಜಿ ಮಾಡಿಕೊಳ್ಳಲು ನಮ್ಮ ಮೇಲೆ ಒತ್ತಡವಿದೆ: ಕುಸ್ತಿಪಟುಗಳ ಆರೋಪ
"ಬ್ರಿಜ್ ಭೂಷಣ್ ಸಿಂಗ್ ಬಂಧನವಾಗದೆ ನಿಷ್ಪಕ್ಷಪಾತ ತನಿಖೆ ಅಸಾಧ್ಯ"
ಹೊಸದಿಲ್ಲಿ: ಭಾರತದ ಕುಸ್ತಿ ಫೆಡರೇಷನ್ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದ ಅಪ್ರಾಪ್ತೆ ಒತ್ತಡದ ಕಾರಣ ತನ್ನ ಹೇಳಿಕೆ ಬದಲಿಸುವಂತಾಗಿದೆ ಎಂದು ಒಲಿಂಪಿಯನ್ ಕುಸ್ತಿಪಟು ಸಾಕ್ಷಿ ಮಲಿಕ್ NDTV ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
“ರಾಜಿ ಮಾಡಿಕೊಳ್ಳಲು ನಮ್ಮ ಮೇಲೆ ಬಹಳಷ್ಟು ಒತ್ತಡವಿದೆ,” ಎಂದು ಹೇಳಿದ ಸಾಕ್ಷಿ ಫೆಡರೇಷನ್ ಅಧ್ಯಕ್ಷ ತಮ್ಮ ಜನರ ಮೂಲಕ ದೂರುದಾರರಿಗೆ ಕರೆ ಮಾಡಿ ಬೆದರಿಸುತ್ತಿದ್ದಾರೆ ಎಂದು ಹೇಳಿದರು.
ದೂರು ವಾಪಸ್ ಪಡೆಯಲು ಹೇರಿದ ಒತ್ತಡದಿಂದಾಗಿ ಅಪ್ರಾಪ್ತೆ ಸಂತ್ರಸ್ತೆಯ ತಂದೆ ಖಿನ್ನತೆಯಲ್ಲಿದ್ದಾರೆ ಎಂದೂ ಬಜರಂಗ್ ಪುಣಿಯಾ ಮತ್ತು ಸಾಕ್ಷಿ ಮಲಿಕ್ ಹೇಳಿದ್ದಾರೆ.
ಆರೋಪಿ ಸಿಂಗ್ ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಆರಂಭದಿಂದಲೂ ಆಗ್ರಹಿಸುತ್ತಿದ್ದೇವೆ, ಅವರ ಬಂಧನವಾಗದೆ ನಿಷ್ಪಕ್ಷಪಾತ ತನಿಖೆ ಅಸಾಧ್ಯ ಎಂದು ಸಾಕ್ಷಿ ಹೇಳಿದರು.
ಜೂನ್ 15ರ ನಂತರ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸುವ ಬಗ್ಗೆ ಇಂದು ನಡೆದ ಮಹಾಪಂಚಾಯತ್ ನಿರ್ಣಯ ಕೈಗೊಂಡಿದೆ ಎಂದು ಪುಣಿಯಾ ಹೇಳಿದರು. ತನಿಖೆಗೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕುರ್ ಜೂನ್ 15 ರ ಗಡುವು ನೀಡಿದ್ದಾರೆ.
“ಸಿಂಗ್ ಬಂಧಿಸಬೇಕೆಂಬ ನಮ್ಮ ಬೇಡಿಕೆಯಿಂದ ನಾವು ಹಿಂದೆ ಸರಿದಿಲ್ಲ,” ಎಂದು ಹೇಳಿದ ಅವರು ಪೊಲೀಸ್ ತನಿಖೆಯ ಮೇಲೆ ವಿಶ್ವಾಸವಿಲ್ಲ ಎಂದರು.
“ಶುಕ್ರವಾರ ಪೊಲೀಸರು ಮಹಿಳಾ ಕುಸ್ತಿಪಟುವೊಬ್ಬರನ್ನು ತನಿಖೆಯ ನೆಪದಲ್ಲಿ ಕುಸ್ತಿ ಫೆಡರೇಷನ್ ಕಚೇರಿಗೆ ಕರೆದುಕೊಂಡು ಹೋದರು. ಅಲ್ಲಿ ಬ್ರಿಜ್ ಭೂಷಣ್ ಸಿಂಗ್ ಇಲ್ಲವೆಂದು ಆಕೆಗೆ ಪೊಲೀಸರು ಸುಳ್ಳು ಹೇಳಿದರು. ಆತ ಅಲ್ಲಿದ್ದಾರೆಂದು ತಿಳಿದು ಆಕೆಗೆ ಭಯವಾಯಿತು,” ಎಂದು ಹೇಳಿದ ಪುಣಿಯಾ, ಇಡೀ ವ್ಯವಸ್ಥೆ ಸಿಂಗ್ ಅವರನ್ನು ರಕ್ಷಿಸುತ್ತಿದೆ ಎಂದು.
“ನಾವು ಎಲ್ಲಾ ಅಪಾಯ ಎದುರಿಸುತ್ತಿದ್ದೇವೆ. ಚಾರ್ಚ್‌ಶೀಟ್ ಬಲವಾಗಿದ್ದರೆ ಸಿಂಗ್ ಅವರ ಬಂಧನವಾಗಬಹುದು,” ಎಂಬ ವಿಶ್ವಾಸ ಅವರು ವ್ಯಕ್ತಪಡಿಸಿದರು.