ಪರ್ಕಳ ಗ್ರಂಥಾಲಯದಲ್ಲಿ ನಿರಂತರ ಬೆಳಕಿನ ವ್ಯವಸ್ಥೆಯ ಕೊರತೆ
ವಿದ್ಯುತ್ ಕೈಕೊಟ್ಟರೆ ಸಾರ್ವಜನಿಕರು ಹೊರಗಡೆ ಓದುವ ಪರಿಸ್ಥಿತಿ !

ಉಡುಪಿ, ಜೂ.10: ಪರ್ಕಳದಲ್ಲಿರುವ ಉಡುಪಿ ನಗರಸಭೆ ಉಪಕಚೇರಿಯ ಬಳಿ ಹೆರ್ಗ ಗ್ರಾಮಕ್ಕೆ ಸಂಬಂಧಪಟ್ಟ ಗ್ರಂಥಾಲಯದಲ್ಲಿ ನಿರಂತರ ಬೆಳಕಿನ ವ್ಯವಸ್ಥೆ ಇಲ್ಲದೆ ವಿದ್ಯುತ್ ವ್ಯತ್ಯಯ ಉಂಟಾದಾಗ ಸಾರ್ವಜನಿಕರು ಹೊರಗಡೆ ಓದುವ ಸ್ಥಿತಿ ಉದ್ಭವಿಸಿದೆ.
ಗ್ರಂಥಾಲಯದ ಒಳಭಾಗದಲ್ಲಿ ಇನ್ವರ್ಟರ್ ವ್ಯವಸ್ಥೆ ಇದ್ದರೂ ಕಾಲಕಾಲಕ್ಕೆ ನಿರ್ವಹಣೆ ಮಾಡದೇ ಕೆಟ್ಟುಹೋಗಿದೆ. ಈ ಬಗ್ಗೆ ಸ್ಥಳೀಯ ಗ್ರಂಥಪಾಲಕರು ಸಂಬಂಧಪಟ್ಟವರಿಗೆ ದೂರು ನೀಡಿದರೂ ಇನ್ನೂ ಸರಿಯಾಗಿಲ್ಲ. ಇದರಿಂದ ಪತ್ರಿಕೆ ಓದುವ ಹವ್ಯಾಸ ಮಾಡಿಕೊಂಡಿರುವ ಸ್ಥಳೀಯರು, ಗ್ರಂಥಾಲಯದ ಹೊರಗಡೆ ಓದುವ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಪ್ರಥಮ ಮಳೆಗೆ ವಿದ್ಯುತ್ ಕೈಕೊಟ್ಟಿದ್ದರಿಂದ ಹಾಗೂ ಗ್ರಂಥಾಲಯದ ಒಳಗಡೆಯು ಬೆಳಕಿನ ಸೌಲಭ್ಯ ಕಡಿಮೆ ಇರುವುದರಿಂದ ಸಾವಜನಿಕರು ಹೊರಗಡೆ ಕುಳಿತು ಓದು ವಂತಾಗಿದೆ.
ಈ ಗ್ರಂಥಾಲಯಕ್ಕೆ ಹೈಟೆಕ್ ಸ್ಪರ್ಶ ನೀಡಬೇಕು. ವಿದ್ಯಾರ್ಥಿಗಳಲ್ಲಿ ಪತ್ರಿಕೆ ಮತ್ತು ಇತರ ಪುಸ್ತಕ ಹಾಗೂ ಗ್ರಂಥಗಳನ್ನು ಓದುವ ಹವ್ಯಾಸ ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಕೆಲಸ ಆಗಬೇಕು. ಈ ಗ್ರಂಥಾಲಯ ನಗರಸಭೆಯ ಸುಪರ್ದಿಗೆ ಬರುವುದರಿಂದ ನಗರಸಭೆ ಈ ಗ್ರಂಥಾಲಯವನ್ನು ಹೈಟೆಕ್ ಮಾದರಿಯ ನ್ನಾಗಿಸಬೇಕು. ಇಲ್ಲಿನ ಗ್ರಂಥ, ಪುಸ್ತಕಗಳನ್ನು ಸುರಕ್ಷಿತವಾಗಿ ಇಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಬೆಳಗಿನ ಸಮಯದಲ್ಲಿ ಹೊರಪ್ರಾಂಗಣದಲ್ಲಿಯೇ ದಿನಪತ್ರಿಕೆಗಳನ್ನು ಓದುವ ಟೇಬಲ್, ಕುರ್ಚಿಗಳನ್ನು ಅಳವಡಿಸ ಬೇಕು. ಬೆಳಕಿನ ವ್ಯವಸ್ಥೆ ಸರಿಪಡಿಸಿ, ಫ್ಯಾನ್ ಅಳವಡಿಸಬೇಕು. ಒಳ ಭಾಗಕ್ಕೂ ಬೆಳಕಿನ ದೀಪದ ಸಂಖ್ಯೆ ಹೆಚ್ಚಿಸಬೇಕು. ಈ ಭಾಗದಲ್ಲಿ ಗ್ರಂಥಾಲಯ ಇದೆ ಎಂಬುದೇ ಹೆಚ್ಚಿನವರಿಗೆ ತಿಳಿದಿಲ್ಲ. ಹಾಗಾಗಿ ಗ್ರಂಥಾಲಯಕ್ಕೆ ಬರುವವರ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್‌ರಾಜ್ ಸರಳೇಬೆಟ್ಟು, ಸ್ಥಳೀಯರಾದ ಜಯ ಶೆಟ್ಟಿ ಬನ್ನಂಜೆ, ಮೋಹನ್‌ದಾಸ್ ನಾಯಕ್ ಆಗ್ರಹಿಸಿದ್ದಾರೆ.