ರಾಹುಲ್ ಗಾಂಧಿ ಒಸಾಮಾ ಬಿನ್ ಲಾಡೆನ್ ನಂತೆ ಗಡ್ಡ ಬೆಳೆಸಿದ್ದಾರೆ ಎಂದ ಬಿಹಾರ ಬಿಜೆಪಿ ಅಧ್ಯಕ್ಷ

ಪಾಟ್ನಾ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಅಮೆರಿಕಾ ಪಡೆಗಳಿಂದ ಹತ್ಯೆಗೀಡಾದ ಅಲ್-ಕೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಗೆ ಹೋಲಿಸಿದ ಬಿಹಾರ ಬಿಜೆಪಿ ಅಧ್ಯಕ್ಷ ಸಾಮ್ರಾಟ್ ಚೌಧುರಿ, ಗಡ್ಡ ಬೆಳೆಸಿದ ಮಾತ್ರಕ್ಕೆ ಯಾರೂ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದಿದ್ದಾರೆ.
ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು “ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಒಸಾಮ ಬಿನ್ ಲಾಡೆನ್‌ನಂತೆ ಗಡ್ಡ ಬೆಳೆಸಿದ್ದಾರೆ ಹಾಗೂ ನರೇಂದ್ರ ಮೋದಿ ಅವರಂತೆ ತಾನು ಕೂಡ ಪ್ರಧಾನಿ ಆಗುತ್ತೇನೆ ಎಂದು ಅಂದುಕೊಂಡಿದ್ದಾರೆ,” ಎಂದು ಹೇಳಿದರು.
ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿ ಗಡ್ಡಧಾರಿಯಾಗಿದ್ದುದನ್ನು ಉಲ್ಲೇಖಿಸಿ ಅವರು ಮೇಲಿನಂತೆ ಹೇಳಿದ್ದಾರೆ.
ಬಿಹಾರ ಮುಖ್ಯಮಂತ್ರಿ ವಿರುದ್ಧವೂ ಕಿಡಿ ಕಾರಿದ ಸಾಮ್ರಾಟ್, “ನಿತೀಶ್ ಕುಮಾರ್ ಅವರು ತಾವು ಪ್ರಧಾನಿಯೆಂದು ಹೇಳಿಕೊಂಡು ದೇಶ ಸುತ್ತುತ್ತಿದ್ದಾರೆ. ನಿತೀಶ್ ಕುಮಾರ್ ಪ್ರಧಾನಿಯೇ? ಅವರು ತಮ್ಮ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆಯೇ ಅಥವಾ ನಾನು ಕಳೆದುಕೊಂಡಿದ್ದೇನೆಯೇ? ದಯವಿಟ್ಟು ಹೇಳಿ,” ಎಂದು ಹೇಳಿದರು.