ಕಲಬುರಗಿ-ಯಾದಗಿರಿ ಹಾಲು ಒಕ್ಕೂಟದಿಂದ ಎಮ್ಮೆ ಹಾಲಿಗೆ ಹೆಚ್ಚಿನ ದರ ನಿಗದಿ

ಕಲಬುರಗಿ: ''ಕಲಬುರಗಿ-ಬೀದರ್- ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ಎಮ್ಮೆ ಹಾಲಿಗೆ ರಾಜ್ಯದಲ್ಲೇ ಹೆಚ್ಚಿನ ದರ ನಿಗದಿ ಮಾಡಿದೆ. ಎಮ್ಮೆ ಹಾಲಿಗೆ ಪ್ರತಿ ಲೀಟರ್ ಗೆ 9.20 ರೂ ಹೆಚ್ಚಿಗೆ ಮಾಡಿ ಒಟ್ಟಾರೆ 45 ರೂ. ಲೀಟರ್ ಹಾಲು ಪಡೆಯಲಾಗುವುದು. ರಾಜ್ಯ ಸರ್ಕಾರದ 5 ರೂ ಪ್ರೋತ್ಸಾಹ ಧನ ಸೇರಿದರೆ ಪ್ರತಿ ಲೀಟರ್ ಗೆ 50 ರೂ ದರ ರೈತನಿಗೆ ದೊರಕುತ್ತದೆ. ಒಟ್ಟಾರೆ ಕೊರತೆ ಹಾಲನ್ನು ನಿಭಾಯಿಸಲು ಅದರಲ್ಲೂ ಎಮ್ಮೆ ಹೈನೋದ್ಯಮಕ್ಕೆ ಉತ್ತೇಜಿಸಲು ಹಾಲಿನ ದರ ಹೆಚ್ಚಳದ ನಿರ್ಧಾರ ತೆಗೆದುಕೊಳ್ಳಲಾಗಿದೆ'' ಎಂದು ಒಕ್ಕೂಟದ ಅಧ್ಯಕ್ಷ ಆರ್. ಕೆ. ಪಾಟೀಲ್ ತಿಳಿಸಿದ್ದಾರೆ.
ಕಲಬುರಗಿಯ ಪತ್ರಿಕಾ ಭವನದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಹಾಲು ಉತ್ಪಾದಕರ ಒಕ್ಕೂಟದಿಂದ ಸಂಘಗಳಿಗೆ ಪ್ರತಿ ಲೀಟರ್ ಗೆ 36.80 ರೂ. ನೀಡಲಾಗುತ್ತಿದೆ. ಅದೇ ರೀತಿ ಹಾಲು ಉತ್ಪಾದಕರಿಗೆ 35.76 ರೂ ನೀಡಲಾಗುತ್ತಿದ್ದರೆ, ಇದಕ್ಕೆ 9.20 ರೂ ಪ್ರತಿ ಲೀಟರ್ ಗೆ ದರ ಹೆಚ್ಚಿಸಲಾಗಿದೆ. ಒಟ್ಟಾರೆ ಸಂಘಗಳಿವೆ ಲೀಟರ್ 46 ರೂ ದರ ದೊರಕಿದರೆ ಹಾಲು ಉತ್ಪಾದಕರಿಹೆ 45 ರೂ ದರ ದೊರಕಲಿದೆ. ಲೀಟರ್ ಎಮ್ಮೆ ಹಾಲಿಗೆ ಹೆಚ್ಚಿಸಲಾಗಿರುವ 9.20 ರೂ ದರ ಜೂನ್ 11ರಿಂದ ಜಾರಿಗೆ ಬರಲಿದೆ ಎಂದು ವಿವರಣೆ ನೀಡಿದರು.
ಕಲಬುರಗಿ, ಬೀದರ್- ಯಾದಗಿರಿ ಹಾಲು ಉತ್ಪಾದಕರ ಒಕ್ಕೂಟದಿಂದ 44 ಸಾವಿರ ಲೀಟರ್ ಹಾಲು ಉತ್ಪಾದನೆ ಮಾಡುತ್ತಿದ್ದು, ಕೊರತೆ ಇರುವ. 75 ಸಾವಿರ ಲೀಟರ್ ಹಾಲಿನ ಪೈಕಿ 40 ಸಾವಿರ ಲೀಟರ್ ಹಾಲನ್ನು ಶಿವಮೊಗ್ಗದಿಂದ ತರಿಸಿಕೊಂಡು ಗ್ರಾಹಕರಿಗೆ ಪೂರೈಸಲಾಗುತ್ತಿದೆ. ಎಮ್ಮೆ ಗೆ ಹೆಚ್ವಿನ ದರ ನೀಡುವ ಮುಖಾಂತರ ಇನ್ನಷ್ಟು ಹಾಲಿನ ಉತ್ಪಾದನೆ ಹೆಚ್ವಿಸಲು ಉದ್ದೇಶಿಸಲಾಗಿದೆ. ಈಗ ಕೇವಲ 2500 ಲೀಟರ್ ಎಮ್ಮೆ ಹಾಲು ಉತ್ಪಾದನೆಯಾಗುತ್ತಿದ್ದು, ಇದನ್ನು ಕನಿಷ್ಠ 10 ಸಾವಿರ ಲೀಟರ್ ಹಾಲು ಉತ್ಪಾದಿಸಲು ಗುರಿ ಹೊಂದಲಾಗಿದೆ ಎಂದು ಆರ್.ಕೆ.ಪಾಟೀಲ್ ವಿವರಣೆ ನೀಡಿದರು.
ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕ ಈರಣ್ಣ ಝಳಕಿ ಹಾಜರಿದ್ದರು.