ಕುಂದಾಪುರ: ಹಾಸ್ಟೆಲ್‌ನಿಂದ ಬಿದ್ದು ವಿದ್ಯಾರ್ಥಿನಿ ಮೃತಪಟ್ಟ ಪ್ರಕರಣದ ತನಿಖೆಗೆ ಹೆತ್ತವರ ಆಗ್ರಹ
ಉಡುಪಿ: ಕೆಲ ದಿನಗಳ ಹಿಂದೆ ಕುಂದಾಪುರ ಖಾಸಗಿ ಶಾಲೆ ಯೊಂದರ ವಿದ್ಯಾರ್ಥಿನಿ, ಕಾರವಾರ ಸಮೀಪದ ಕಾಜೂಬಾಗ್‌ನ ತನ್ವಿ ರೋಶನ್ ಪಾಲೇಕರ್(14) ಎಂಬವರು ಹಾಸ್ಟೆಲ್ ಕಟ್ಟಡದ ಮಹಡಿಯಿಂದ ಬಿದ್ದು ಮೃತಪಟ್ಟ ಪ್ರಕರಣದ ಕುರಿತು ಸಂಶಯ ವ್ಯಕ್ತಪಡಿಸಿರುವ ಹೆತ್ತವರು, ಈ ಬಗ್ಗೆ ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಿ ನ್ಯಾಯ ಒದಗಿಸಿ ಕೊಡಬೇಕೆಂದು ಒತ್ತಾಯಿಸಿದ್ದಾರೆ.
ತನ್ವಿ ಸಾವಿನ ಬಗ್ಗೆ ಸಂಶಯಾಸ್ಪ ಇರುವುದಾಗಿ ಕುಂದಾಪುರ ಪೊಲೀಸ್ ಠಾಣೆಗೆ ಇಂದು ದೂರು ನೀಡಿದ ಬಳಿಕ ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೃತ ವಿದ್ಯಾರ್ಥಿನಿಯ ತಂದೆ ರೋಶನ್ ನಾರಾಯಣ ಪಾಲೇಕರ್, ಎಂಟನೇ ತರಗತಿಯವರೆಗೆ ಕಾರವಾರದ ಖಾಸಗಿ ಶಾಲೆಯಲ್ಲಿ ಕಲಿತ ತನ್ವಿಯನ್ನು ಒಂಭತ್ತನೇ ತರಗತಿಗಾಗಿ ಕುಂದಾಪುರದ ಖಾಸಗಿ ಶಾಲೆಗೆ ಸೇರಿದ್ದೆವು. ಅದಕ್ಕಾಗಿ ಆಕೆ ಮೇ 31ರಂದು ಕಾರವಾರದಿಂದ ಕುಂದಾಪುರಕ್ಕೆ ಬಂದಿದ್ದಳು. ಜೂ.1ರಿಂದ ತರಗತಿ ಆರಂಭಗೊಂಡಿದ್ದು, ಅದೇ ಶಾಲೆಯ ಹಾಸ್ಟೆಲ್‌ನಲ್ಲಿ ಉಳಿದು ಕೊಂಡಿದ್ದಳು. ಜೂ.5ರಂದು ಬೆಳಗಿನ ಜಾವ ಆಕೆ ಹಾಸ್ಟೆಲ್ ಕಟ್ಟಡದ ಎರಡನೇ ಮಹಡಿಯಿಂದ ಅಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಬಗ್ಗೆ ಶಾಲೆಯವರು ತಿಳಿಸಿದ್ದರು ಎಂದರು.
ಇದೀಗ ನಾವು ಇಂದು ಶಾಲೆಗೆ ತೆರಳಿ ಆಕೆ ಬಿದ್ದ ಜಾಗವನ್ನು ಪರಿಶೀಲಿಸಿದಾಗ ಆಕೆ ಅಲ್ಲಿಂದ ಕಾಲು ಜಾರಿ ಬೀಳಲು ಅಥವಾ ಅಲ್ಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಆಕೆ 72ಕೆ.ಜಿ. ತೂಕ ಇದ್ದು, 4.4 ಅಡಿ ಎತ್ತರ ಇದ್ದಾಳೆ. ಆಕೆ ಬಿದ್ದ ಜಾಗವು ನೆಲದಿಂದ ಏಳು ಅಡಿ ಎತ್ತರದಲ್ಲಿದೆ. ಅಲ್ಲಿಂದ ಹತ್ತಿ ಆಕೆ ಕೆಳಗೆ ಹಾರಲು ಸಾಧ್ಯವೇ ಇಲ್ಲ. ಇದರ ಬಗ್ಗೆ ನಮಗೆ ತುಂಬಾ ಸಂಶಯ ಇದೆ. ಆದುದರಿಂದ ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ ಎಂದು ಅವರು ಹೇಳಿದರು.
ಆಕೆ ಮನೆಯಿಂದ ತುಂಬಾ ಖುಷಿಯಾಗಿಯೇ ಬಂದಿದ್ದಾಳೆ. ಕಲಿಯುವುದರಲ್ಲಿ ಪ್ರತಿಭಾನ್ವಿತೆ ಹಾಗೂ ಧೈರ್ಯ ವಂತೆ ಆಗಿದ್ದ ತನ್ವಿ, ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವಳು ಅಲ್ಲ. ಆದರೆ ಶಾಲೆಗೆ ಬಂದ ನಂತರ ಏನಾಯಿತು ಎಂಬುದು ಗೊತ್ತಿಲ್ಲ. ನಮಗೆ ಶಾಲೆಯ ಪ್ರಾಂಶುಪಾಲರು, ಮಕ್ಕಳ ಬಗ್ಗೆ ಯಾವುದೇ ಸಂಶಯ ಇಲ್ಲ. ಆಕೆ ಸಾವಿನ ಹಿಂದಿನ ಸತ್ಯಾಂಶ ಪೊಲೀಸ್ ತನಿಖೆಯಿಂದಲೇ ಹೊರಬರಬೇಕು. ಈ ಮೂಲಕ ನಮಗೆ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮೃತ ವಿದ್ಯಾರ್ಥಿನಿಯ ತಾಯಿ ರಂಜನ ಆರ್. ಪಾಲೇಕರ್, ಉತ್ತರ ಕನ್ನಡ ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಾಘು ನಾಯ್ಕ್, ಜ್ಯೋತಿ, ಈಶ್ವರ ನಾಯ್ಕ್, ದತ್ತರಾಮ ನಾಯ್ಕ್, ಪ್ರಕಾಶ್ ಕಾಮತ್ ಉಪಸ್ಥಿತರಿದ್ದರು.
‘ಎರೋನಾಟಿಕಲ್ ಇಂಜಿನಿಯರ್ ಆಗಬೇಕೆಂಬ ಗುರಿಯೊಂದಿಗೆ ಆಸಕ್ತಿ ಯಿಂದ ಓದುತ್ತಿದ್ದಳು. ಜೂ.4ರಂದು ಆಕೆಯ ಹುಟ್ಟುಹಬ್ಬ ಇತ್ತು. ಅದನ್ನು ಆಚರಿಸಬೇಕು ಎಂದು ಹೇಳುತ್ತಿದ್ದಳು. ಅವಳ ತಾಯಿ ಶಾಲೆಗೆ ಕರೆ ಮಾಡಿ ಹುಟ್ಟುಹಬ್ಬದ ದಿನ ಅವಳನ್ನು ಕಳುಹಿಸಿಕೊಡುವಂತೆ ಕೇಳಿಕೊಂಡಿದ್ದರು. ಆದರೆ ಅದಕ್ಕೆ ಶಾಲೆಯವರು ಅವಕಾಶ ನೀಡಿರಲಿಲ್ಲ’
-ರೋಶನ್ ನಾರಾಯಣ ಪಾಲೇಕರ್, ಮೃತಳ ತಂದೆ