ಸಾಗರ | ಹಾಸ್ಟೆಲ್ ನಲ್ಲಿ ದಲಿತ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು ಪ್ರಕರಣ: ಪೋಷಕರಿಂದ ಶಾಲೆ ಎದುರು ಪ್ರತಿಭಟನೆ
ಪೊಲೀಸರಿಂದ ಶಾಲೆ ಮುಖ್ಯಸ್ಥ, ವಾರ್ಡನ್ ವಿಚಾರಣೆ

ಸಾಗರ: ಇಲ್ಲಿನ ಖಾಸಗಿ ವಸತಿ ಶಾಲೆಯಲ್ಲಿ ಗುರುವಾರ ಸಂಭವಿಸಿದ್ದ ದಲಿತ ವಿದ್ಯಾರ್ಥಿನಿ ತೇಜಸ್ವಿನಿಯ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಬಾಲಕಿಯ ಕುಟುಂಬಸ್ಥರು, ಪೋಷಕರು ಹಾಗೂ ಹಲವು ಗ್ರಾಮಸ್ಥರು ಶಾಲೆಯ ಮುಖ್ಯಸ್ಥರನ್ನು ಬಂಧಿಸಿ, ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು ಎಂದು ಒತ್ತಾಯಿಸಿ ಶನಿವಾರ ಶಾಲೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಮುಂಜಾನೆ ಶಿವಪುರ ಗ್ರಾಮದ 40ಕ್ಕೂ ಹೆಚ್ಚು ಜನ ಸಾಗರಕ್ಕೆ ಬಂದು ಘಟನೆ ನಡೆದಿದ್ದ ವನಶ್ರೀ ವಸತಿ ಶಾಲೆಯ ಎದುರು ಪ್ರತಿಭಟನೆ ನಡೆಸಿದರು.
ಸುದ್ದಿ ತಿಳಿದ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ, ಶಾಲೆ ಮುಖ್ಯಸ್ಥ ಮಂಜಪ್ಪ ಹಾಗೂ ವಾರ್ಡನ್ ಶೈಲಾರನ್ನು ವಿಚಾರಣೆಗಾಗಿ ಠಾಣೆಗೆ ಕರೆತಂದರು.
ಠಾಣೆ ಎದುರು ಮಾಧ್ಯಮಗಳೊಂದಿಗೆ ಮಾತನಾಡಿದ ಮೃತ ಬಾಲಕಿ ದೊಡ್ಡಮ್ಮ ಚಂದ್ರಮ್ಮರವರು, ''ಬಡತನದಲ್ಲಿ ಇರುವ ನಾವು ವನಶ್ರೀ ವಸತಿ ಶಾಲೆ ಒಳ್ಳೆಯದು ಎಂದು ಕೇಳಿ ತಿಳಿದು ಇಲ್ಲಿಗೆ ನಮ್ಮ ಕುಟುಂಬದ 8 ಮಕ್ಕಳನ್ನು ಸೇರಿಸಿದ್ದೆವು. ಶಾಲೆಗೆ ಸೇರಿಸುವಾಗ ನಮ್ಮ ಮಗಳು ಆರೋಗ್ಯವಾಗಿದ್ದಳು. ಆದರೆ ಬುಧವಾರ ಯೋಗಾಸನ ಮಾಡುವಾಗ ಕಾಲು ನೋವಾಗಿದೆ ಎನ್ನುವ ಕಾರಣಕ್ಕೆ ಮಹಿಳಾ ಸಿಬ್ಬಂದಿ ಬಳಸದೆ ಶಾಲೆ ಮುಖ್ಯಸ್ಥ ಮಂಜಪ್ಪನವರು ರಾತ್ರಿ ಹೆಣ್ಣು ಮಗಳ ಕಾಲಿಗೆ ಮುಲಾಮು ಹಚ್ಚಿ ತಿಕ್ಕಿದ್ದಾರೆ. ಅತಿಯಾಗಿ ನೀರು ಕುಡಿಸಿದ್ದಾರೆ. ಅಲ್ಲದೇ ಗುರುವಾರ ಬೆಳಗ್ಗೆ ಆಸ್ಪತ್ರೆಗೆ ಬರುವಾಗ ತೇಜಸ್ವಿನಿಗೆ ಆರೋಗ್ಯ ಸರಿಯಾಗಿಲ್ಲ ಎಂದು ಮಾಹಿತಿ ಮುಟ್ಟಿಸಿದ್ದಾರೆ. ರಾತ್ರಿಯೇ ಹೇಳಿದ್ದರೆ ನಾವು ಹೇಗಾದರೂ ಮಾಡಿ ಮಗಳನ್ನು ಬದುಕಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೆವು. ಅಂತಿಮವಾಗಿ ತೇಜಸ್ವಿನಿಯ ಜೀವಕ್ಕೆ ತೊಂದರೆ ಕೊಟ್ಟಿದ್ದಾರೆ. ನಗು ನಗುತ್ತಾ ಶಾಲೆಗೆ ಬಂದ ಮಗಳ ಮುಖ ನೋಡಲು ಕೊಟ್ಟಿಲ್ಲ. ನಮಗೆ ನ್ಯಾಯ ಸಿಗುವವರೆಗೂ ಹಿಂದೆ ಸರಿಯುವುದಿಲ್ಲ'' ಎಂದು ಅಳಲು ತೋಡಿಕೊಂಡರು.
ಪೋಷಕರು ಹಾಗೂ ಗ್ರಾಮಸ್ಥರಿಗೆ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಶಿಕಾರಿಪುರ, ಹಲವು ಪದಾಧಿಕಾರಿಗಳು ಬೆಂಬಲ ಘೋಷಿಸಿದ್ದು, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ನಡುವೆ ಮಕ್ಕಳ ರಕ್ಷಣಾ ಸಮಿತಿ ಸದಸ್ಯರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
