ಕೊನೆಗೂ ಉಡುಪಿ ಜಿಲ್ಲೆಯಲ್ಲಿ ಮಳೆಗಾಲದ ವಾತಾವರಣ!

ಉಡುಪಿ: ಮೇ ತಿಂಗಳ ಮುಂಗಾರು ಪೂರ್ವ ಮಳೆ ಸಂಪೂರ್ಣ ಕೈಕೊಟ್ಟ ಮೇಲೆ ನಿನ್ನೆ ಸಂಜೆಯ ಬಳಿಕ ಉಡುಪಿ ಜಿಲ್ಲೆಯಲ್ಲಿ ಮಳೆಗಾಲದ ವಾತಾವರಣ ಕಾಣಿಸಿಕೊಂಡಿದೆ. ಕೇರಳವನ್ನು ಪ್ರವೇಶಿಸಿರುವ ಮುಂಗಾರು ಮಳೆ ಕರ್ನಾಟಕ ಕರಾವಳಿಗೂ ಕಾಲಿರಿಸಿರುವ ಬಗ್ಗೆ ಮಾಹಿತಿ ಸಿಕ್ಕಿಲ್ಲವಾದರೂ ಇಂದು ಇಡೀ ದಿನ ಮಳೆಗಾಲದ ತಣ್ಣಗಿನ ವಾತಾವರಣ ಎಲ್ಲೆಲ್ಲೂ ಕಂಡು ಬಂದಿದೆ.
ಹೀಗಾಗಿ ಕಳೆದೆರಡು ತಿಂಗಳಿಂದ ಉರಿ ಸೆಕೆಯಿಂದ ಕಂಗಾಲಾಗಿದ್ದ ಜಿಲ್ಲೆಯ ಜನತೆ ತಂಪು ತಂಪು ಹವಾಮಾನ ದಿಂದ ಖುಷಿ ಅನುಭವಿಸಿದರು. ಮುಂಗಾರು ಪ್ರಾರಂಭದ ಬಿರುಸಿನ ಮಳೆ ಸುರಿಯದಿದ್ದರೂ, ದಿನದಲ್ಲಿ ಆಗಾಗ ಮಳೆ ಸುರಿಯುತ್ತಿತ್ತು.
ಇಂದು ಬೆಳಗ್ಗೆ 8ಗಂಟೆಗೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 21.1ಮಿ.ಮೀ. ಮಳೆಯಾಗಿದೆ. ಇದು ಜನವರಿ ಬಳಿಕ ದಿನದಲ್ಲಿ ಸುರಿದ ಅತ್ಯಧಿಕ ಮಳೆಯಾಗಿದೆ.ಉಡುಪಿಯಲ್ಲಿ 33.2ಮಿ.ಮೀ., ಬ್ರಹ್ಮಾವರ-14.5, ಕಾಪು-4.8, ಕುಂದಾಪುರ- 24.2, ಬೈಂದೂರು-32.7, ಕಾರ್ಕಳ- 27.5 ಹಾಗೂ ಹೆಬ್ರಿಯಲ್ಲಿ 12.1ಮಿ.ಮೀ. ಮಳೆಯಾದ ಬಗ್ಗೆ ವರದಿಗಳು ಬಂದಿವೆ.
ಕೊಟ್ಟಿಗೆಗೆ ಹಾನಿ: ನಿನ್ನೆ ಸಂಜೆ ಸುರಿದ ಗಾಳಿ-ಮಳೆಯಿಂದ ಬೈಂದೂರು ತಾಲೂಕು ಮರವಂತೆ ಗ್ರಾಮದ ಚಂದ್ರಾವತಿ ಶೆಣೈ ಎಂಬವರ ಕೊಟ್ಟಿಗೆಗೆ ಭಾಗಶ: ಹಾನಿಯಾಗಿದ್ದು 15,000ರೂ.ನಷ್ಟು ನಷ್ಟ ಸಂಭವಿಸಿದೆ.
ಮೀನುಗಾರರಿಗೆ ಎಚ್ಚರಿಕೆ: ಅರಬಿಸಮುದ್ರದಲ್ಲಿ ಎದ್ದಿರುವ ಚಂಡಮಾರುತದಿಂದ ಕರ್ನಾಟಕ ಕರಾವಳಿಯಲ್ಲಿ ಮುಂದಿನ 24 ಗಂಟೆಗಳಲ್ಲಿ ಗಂಟೆಗೆ 40ರಿಂದ 45ಕಿ.ಮೀ. ವೇಗದ ಬಿರುಗಾಳಿಯೊಂದಿಗೆ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಆದುದರಿಂದ ಕರಾವಳಿ ತೀರದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಅದು ಎಚ್ಚರಿಕೆ ನೀಡಿದೆ. ಸಮುದ್ರ ಪ್ರಕ್ಷುಬ್ದವಾಗಿರಲಿದ್ದು, 3.5ರಿಂದ 4ಮೀ. ಎತ್ತರದ ಅಲೆ ಏಳುವ ಸಾಧ್ಯತೆ ಇದೆ. ಮುಂದಿನ 24 ಗಂಟೆಗಳಲ್ಲಿ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯನ್ನೂ ಹವಾಮಾನ ಇಲಾಖೆ ತಿಳಿಸಿದೆ.