ಜಮ್ಮು-ಕಾಶ್ಮೀರ: ಪೆಲೆಟ್ ಗುಂಡಿನಿಂದ ದೃಷ್ಟಿ ಕಳೆದುಕೊಂಡ ವಿದ್ಯಾರ್ಥಿನಿ 12ನೇ ತರಗತಿ ಉತ್ತೀರ್ಣ

ಶ್ರೀನಗರ, ಜೂ. 10: ಜಮ್ಮು ಹಾಗೂ ಕಾಶ್ಮೀರದಲ್ಲಿ 2016ರಲ್ಲಿ ಪೆಲೆಟ್ ಗುಂಡು ಬಡಿದ ಎರಡೂ ಕಣ್ಣಿನ ದೃಷ್ಟಿ ಕಳೆದುಕೊಂಡ ದಕ್ಷಿಣ ಕಾಶ್ಮೀರದ ಶೋಪಿಯಾನ ಜಿಲ್ಲೆಯ 18 ವರ್ಷದ ಯುವತಿ ಇನ್ಶಾ ಮುಸ್ತಾಖ್ 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇನ್ಶಾ ಮುಸ್ತಾಖ್ 12ನೇ ತರಗತಿ ಪರೀಕ್ಷೆಯಲ್ಲಿ 319 ಅಂಕಗಳನ್ನು ಪಡೆದುಕೊಂಡಿದ್ದಾಳೆ. ‘‘ನಾನು 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ನನಗೆ ಬೆಂಬಲ ನೀಡಿದ ಹೆತ್ತವರಿಗೆ ಅಭಾರಿಯಾಗಿದ್ದೇನೆ’’ ಎಂದು ಇನ್ಶಾ ಮುಸ್ತಾಖ್ ಹೇಳಿದ್ದಾರೆ.
ತನ್ನ ಭವಿಷ್ಯದ ಬಗ್ಗೆ ಪ್ರತಿಕ್ರಿಯಿಸಿರುವ ಇನ್ಶಾ ಮುಸ್ತಾಖ್, ಪದವಿ ಪಡೆಯಬೇಕು. ಅನಂತರ ನಾಗರಿಕ ಸೇವಾ ಪರೀಕ್ಷೆಗೆ ಸಿದ್ಧತೆ ನಡೆಸಬೇಕು ಎಂದಿದ್ದಾರೆ. ‘‘ನನ್ನ ಪುತ್ರಿ 12ನೇ ತರಗತಿ ಪರೀಕ್ಷೆ ಉತ್ತೀರ್ಣಳಾಗಿದ್ದಾಳೆ ಎಂಬುದನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಎರಡು ಕಣ್ಣುಗಳನ್ನು ಕಳೆದುಕೊಂಡ ಅವಳಿಗೆ ಬೋಧಿಸಿದ ಹಾಗೂ ಬೆಂಬಲಿಸಿದ ಆಕೆಯ ಅಧ್ಯಾಪಕರಿಗೆ ಅಭಾರಿಯಾಗಿದ್ದೇನೆ’’ ಎಂದು ಇನ್ಶಾ ಮುಸ್ತಾಖ್ ಅವರ ತಂದೆ ಮುಸ್ತಾಖ್ ಅಹ್ಮದ್ ಹೇಳಿದ್ದಾರೆ.
ಭದ್ರತಾ ಪಡೆ ನಡೆಸಿದ ಎನ್ಕೌಂಟರ್ನಲ್ಲಿ ಹಿಜ್ಬುಲ್ ಕಮಾಂಡರ್ ಬುರ್ಹಾನ್ ವಾನಿ ಸಾವನ್ನಪ್ಪಿದ ಮೂರು ದಿನದ ಬಳಿಕ 2016 ಜುಲೈ 11ರಂದು ಶೋಪಿಯಾನ ಜಿಲ್ಲೆಯ ಸೆಡೋ ಗ್ರಾಮದಲ್ಲಿರುವ ತನ್ನ ಮನೆಯಲ್ಲಿದ್ದಾಗ ಇನ್ಶಾ ಮುಸ್ತಾಖ್ಗೆ ಪೆಲೆಟ್ ಗುಂಡು ಅಪ್ಪಳಿಸಿತ್ತು. ಇದರಿಂದ ಅವರ ಎರಡೂ ಕಣ್ಣುಗಳಿಗೂ ಹಾನಿಯಾಗಿತ್ತು. ಅವರು ಜಮ್ಮು-ಕಾಶ್ಮೀರ ಹಾಗೂ ಇತರ ಕಡೆ ಹಲವು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ, ವೈದ್ಯರಿಗೆ ಆಕೆಯ ದೃಷ್ಟಿಯನ್ನು ಮರಳಿಸಲು ಸಾಧ್ಯವಾಗಿರಲಿಲ್ಲ.