ಶಾಹೀನ್ ಗ್ರೂಪ್ ಶಿಕ್ಷಣ ಸಂಸ್ಥೆಗಳ ಜೊತೆ ಶೆಫರ್ಡ್ಸ್ ಇಂಟರ್‌ನ್ಯಾಶನಲ್ ಅಕಾಡೆಮಿ ಶೈಕ್ಷಣಿಕ ಒಪ್ಪಂದ

ಮಂಗಳೂರು: ಪ್ರತಿಷ್ಠಿತ ಶಾಹೀನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್, ಬೀದರ್ ಮತ್ತು ದಿ ಶೆಫರ್ಡ್ಸ್ ಇಂಟರ್‌ನ್ಯಾಶನಲ್ ಅಕಾಡೆಮಿ ಜೊತೆಯಾಗಿ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಮಂಗಳೂರಿನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಎರಡೂ ಸಂಸ್ಥೆಗಳು ಸೇರಿಕೊಂಡು 2024-25ರ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ದಿ ಶೆಫರ್ಡ್ಸ್-ಶಾಹೀನ್ ಪಿಯು ಕಾಲೇಜು ಹಾಗೂ ನೀಟ್ ಅಕಾಡೆಮಿಯನ್ನು ಮಂಗಳೂರಿನಲ್ಲಿ ಸ್ಥಾಪಿಸಲು ಯೋಜಿಸಿದೆ.
ಈ ಶಿಕ್ಷಣ ಸಂಸ್ಥೆಯಲ್ಲಿ ಪಿಯುಸಿಯೊಂದಿಗೆ ನೀಟ್ ತರಬೇತಿಯನ್ನೂ ನೀಡಲಾಗುವುದು. ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಸ್ಫರ್ಧಾತ್ಮಕ ಪರೀಕ್ಷೆಗಳ ಮೂಲಕ ಅವಕಾಶಗಳನ್ನು ತೆರೆಯಲು ದಿ ಶೆಫರ್ಡ್ಸ್-ಶಾಹೀನ್ ಪಿಯು ಕಾಲೇಜಿನ ಪ್ರಮುಖ ಧ್ಯೇಯವಾಗಿದೆ. ಶಾಹೀನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಮೂಲಕ ದೇಶಾದ್ಯಂತ 32,000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವರ್ಷಂಪ್ರತಿ ಶಾಹೀನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ ಮೂಲಕ ವೈದ್ಯಕೀಯ ಸೀಟುಗಳನ್ನು ಪಡೆಯುತ್ತಿದ್ದಾರೆ.
ಶಾಹೀನ್ ಎಜುಕೇಶನ್ ಫೌಂಡೇಶನ್ ಬೀದರ್ ಮತ್ತು ದಿ ಶೆಫರ್ಡ್ಸ್ ಇಂಟರ್ನ್ಯಾಷನಲ್ ಅಕಾಡೆಮಿ ಪರವಾಗಿ ಅಧ್ಯಕ್ಷರಾದ ಡಾ. ಅಬ್ದುಲ್ ಖದೀರ್ ಹಾಗೂ ಎ.ಆರ್. ಮುಹಮ್ಮದ್ ನಿಸಾರ್ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದರು.
ಈ ಸಂದರ್ಭದಲ್ಲಿ ಶೆಫರ್ಡ್ ಇಂಟರ್‌ನ್ಯಾಶನಲ್ ಅಕಾಡೆಮಿಯ ಟ್ರಸ್ಟಿಗಳಾದ ಎಸ್.ಎಂ. ಫಾರೂಕ್, ನೌಶಾದ್ ಎ.ಕೆ, ಮುಹಮ್ಮದ್ ರಿಝ್ವಾನ್, ಶಾಜಿದ್ ಎ.ಕೆ., ನಾಝಿಮ್ ಎ.ಕೆ., ಶಾಹೀನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ನ ಸಿಇಒ ತೌಸೀಫ್ ಹಾಗೂ ಕಮ್ಯೂನಿಟಿ ಸೆಂಟರ್ ನ ಹನೀಫ್ ಪುತ್ತೂರು ಮತ್ತು ಎ.ಕೆ ಸಮೂಹ ಸಂಸ್ಥೆಗಳ ಸಿಎಸ್‌ಒ ಅಬ್ದುಲ್ ರವೂಫ್ ಶೇಖ್ ಉಪಸ್ಥಿತರಿದ್ದರು.