ಹೆಬ್ರಿ: ಸೋಮೇಶ್ವರ ಬಳಿ ಭೀಕರ ರಸ್ತೆ ಅಪಘಾತ; ಶಿಕ್ಷಣ ಇಲಾಖೆ ಅಧಿಕಾರಿ ಸಹಿತ ಇಬ್ಬರು ಮೃತ್ಯು

ಹೆಬ್ರಿ, ಜೂ.11: ಬಸ್ಸೊಂದು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ಹೆಬ್ರಿ -ಆಗುಂಬೆ ರಾಷ್ಟ್ರೀಯ ಹೆದ್ದಾರಿ 169 ಎ ಇದರ ಸೋಮೇಶ್ವರ ಬಳಿ ಸೀತಾನದಿ ಎಂಬಲ್ಲಿ ಇಂದು ಮಧ್ಯಾಹ್ನ 1.30ರ ಸುಮಾರಿಗೆ ನಡೆದಿದೆ.
ಮೃತರನ್ನು ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಮೊದಲ ದರ್ಜೆ ಸಹಾಯಕ ಸುಬ್ಬಣ್ಣ ಗಾಣಿಗ ಹಾಗೂ ಉಡುಪಿ ಇಂದಿರಾ ನಗರ ಶಾಲೆಯ ದೈಹಿಕ ಶಿಕ್ಷಕ, ಅಲೆವೂರು ನಿವಾಸಿ ಸೋಮಶೇಖರ್ ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಸುದರ್ಶನ ಹಾಗೂ ಸತೀಶ್ ಎಂಬವರು ಗಾಯಗೊಂಡಿದ್ದಾರೆ.
ಇವರು ದಾವಣಗೆರೆ ಜಿಲ್ಲೆಯ ಚೆನ್ನಗಿರಿಯಲ್ಲಿನ ಸ್ನೇಹಿತ ಶಿಕ್ಷಕನ ಮದುವೆ ಮುಗಿಸಿ ವಾಪಾಸ್ಸು ಉಡುಪಿಗೆ ಬರುತ್ತಿರುವಾಗ ಉಡುಪಿ ಕಡೆಯಿಂದ ಆಗುಂಬೆ ಕಡೆಗೆ ಎದುರಿನಿಂದ ಬರುತ್ತಿದ್ದ ಮಿನಿ ಬಸ್ ಮುಖಾಮುಖಿ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರ ಪರಿಣಾಮ ಕಾರಿನಲ್ಲಿದ್ದ ಇವರಿಬ್ಬರು ಗಂಭೀರ ವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಹೆಬ್ರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.



Next Story