‘ಶಕ್ತಿ’ ಯೋಜನೆ ಜಾರಿಗೆ ಮಹಿಳೆಯರ ಸಂಭ್ರಮ

ಬೆಂಗಳೂರು: ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಶಕ್ತಿ ಯೋಜನೆಗೆ ರಾಜ್ಯದಲ್ಲಿ ಚಾಲನೆ ಸಿಕ್ಕಿದ್ದು, ಮೊದಲ ದಿನವೇ ತಮ್ಮ ಇಷ್ಟದ ಪ್ರೇಕ್ಷಣಿಯ ಸ್ಥಳಗಳು ಸೇರಿದಂತೆ ವಿವಿಧೆಡೆಗೆ ಮಹಿಳೆಯರು ಪ್ರಯಾಣ ಬೆಳೆಸಿ ಸಂಭ್ರಮಿಸಿದರು.
ಕಾಂಗ್ರೆಸ್ ಪಕ್ಷವು ಚುನಾವಣೆಗೆ ಸಂದರ್ಭದಲ್ಲಿ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಸಾರಿಗೆ ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಯೂ ಸರಕಾರ ಅಧಿಕಾರಕ್ಕೆ ಬಂದ ತಿಂಗಳ ಒಳಗೆ ಅನುಷ್ಟಾನಕ್ಕೆ ಬಂದಿದೆ. ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಮತ್ತಿತರ ಭಾವಚಿತ್ರವುಳ್ಳ ದಾಖಲೆಗಳೊಂದಿಗೆ ಆಗಮಿಸಿದ್ದ ಮಹಿಳೆಯರು ಸಾರಿಗೆ ಬಸ್‍ಗಳಲ್ಲಿ ಅತ್ಯಂತ ಸಂತೋಷದಿಂದಲೇ ಪ್ರಯಾಣ ಮಾಡಿದರು.
ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ’ ಯೋಜನೆಗೆ ರಾಜ್ಯಾದ್ಯಂತ ಏಕಕಾಲದಲ್ಲಿ ಚಾಲನೆ ನೀಡಿದ್ದು, ಅತ್ತ ವಿಧಾನಸೌಧದ ಬಳಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಯೋಜನೆಗೆ ಚಾಲನೆ ನೀಡಿದರೆ, ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಉಸ್ತುವಾರಿ ಸಚಿವರು, ಶಾಸಕರು, ಜನಪ್ರತಿನಿಧಿಗಳು ಶಕ್ತಿಗೆ ಯೋಜನೆಗೆ ಹಸಿರು ನಿಶಾನೆ ತೋರಿಸಿದರು.
ತಳಿರು, ತೋರಣ, ಬಾಳೆಕಂದು, ವಿವಿಧ ಬಗೆಯ ಹೂವುಗಳಿಂದ ಶೃಂಗಾರಗೊಂಡ ಸಾರಿಗೆ ಬಸ್‍ಗಳಲ್ಲಿ ಮಹಿಳೆಯರು ಸಂತಸದಿಂದ ತಮ್ಮಿಷ್ಟದಂತೆ ಪ್ರಯಾಣಿಸಿ ಸಂಭ್ರಮಿಸಿದರು. ಲಿಂಗತ್ವ ಅಲ್ಪಸಂಖ್ಯಾತರು, ವಿದ್ಯಾರ್ಥಿನಿಯರು ಸೇರಿದಂತೆ ಎಲ್ಲ ಮಹಿಳೆಯರಿಗೂ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ. ಹೀಗಾಗಿ ಮಹಿಳೆಯರಿಗೆ ಎಲ್ಲಿಗೆ ಬೇಕಾದರೂ ಹೋದರೂ ಸರಕಾರಿ ಬಸ್‍ಗಳಲ್ಲಿ ಪ್ರಯಾಣ ಮಾಡಬಹುದು.
ರಾಜಧಾನಿ ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ಉಡುಪಿ. ತುಮಕೂರು, ಮಂಡ್ಯ, ಚಿಕ್ಕಮಗಳೂರು, ಚಾಮರಾಜನಗರ, ಚಿತ್ರದುರ್ಗ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಬೀದರ್ ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿಯೂ ಶಕ್ತಿ ಯೋಜನೆಯನ್ನೂ ಏಕಕಾಲದಲ್ಲಿ ಜಾರಿಗೊಳಿಸಿದ್ದು, ಲಕ್ಷಾಂತರ ಮಹಿಳೆಯರು ಸಾರಿಗೆ ಬಸ್‍ಗಳಲ್ಲಿ ಪ್ರಯಾಣ ಬೆಳೆಸಿ ಸಂಭ್ರಮಿಸಿದರು.
‘ಕುಟುಂಬದ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊತ್ತು ಹಗಲಿರುಳು ಶ್ರಮಿಸುತ್ತಿರುವ ನನ್ನ ಸಹೋದರಿಯರಿಗೆ, ಉಜ್ವಲ ಭವಿಷ್ಯದ ಕನಸು ಕಟ್ಟಿಕೊಂಡು ಶಾಲಾ-ಕಾಲೇಜುಗಳಿಗೆ ಪ್ರಯಾಣ ಬೆಳೆಸುವ ವಿದ್ಯಾರ್ಥಿನಿಯರಿಗೆ, ಅನಾರೋಗ್ಯ, ಅಗತ್ಯ ವಸ್ತುಗಳ ಖರೀದಿ ಇನ್ನಿತರ ಕಾರ್ಯಗಳ ನಿಮಿತ್ತ ಪ್ರಯಾಣ ಮಾಡುವ ತಾಯಂದಿರಿಗೆ ನಮ್ಮ ಈ ‘ಶಕ್ತಿ ಯೋಜನೆ’ಯನ್ನು ಅತ್ಯಂತ ಹೆಮ್ಮೆಯಿಂದ ಅರ್ಪಿಸುತ್ತಿದ್ದೇನೆ. ಆರ್ಥಿಕ ಸಂಕಷ್ಟದ ನಡುವೆಯೂ ಬದುಕಿನ ಉತ್ಸಾಹ ಕಳೆದುಕೊಳ್ಳದೆ, ಸವಾಲುಗಳನ್ನು ಮೆಟ್ಟಿನಿಂತು ಹೋರಾಟದ ಮೂಲಕ ಬದುಕು ಕಟ್ಟಿಕೊಂಡಿರುವ ಕನ್ನಡ ನೆಲದ ಪ್ರತಿ ಮಹಿಳೆಯೂ ಈ ಯೋಜನೆಯ ಹಿಂದಿನ ಪ್ರೇರಕ ಶಕ್ತಿ. ನಾಡಿನ ಎಲ್ಲ ಮಹಿಳೆಯರು ಈ ಯೋಜನೆಯ ಲಾಭ ಪಡೆದು ಮತ್ತಷ್ಟು ಸಶಕ್ತ ಮತ್ತು ಸ್ವಾವಲಂಬಿಗಳಾಗಲಿ ಎಂದು ಮನಸ್ಫೂರ್ತಿಯಾಗಿ ಹಾರೈಸುತ್ತೇನೆ’
-ಸಿದ್ದರಾಮಯ್ಯ ಮುಖ್ಯಮಂತ್ರಿ
‘ನಾನು ಕಾಲೇಜು ವಿದ್ಯಾರ್ಥಿನಿ. ವಿದ್ಯಾರ್ಥಿ ಬಸ್ ಪಾಸ್‍ಗೆ ಪ್ರತಿ ಸೆಮಿಸ್ಟರ್‍ಗೆ 1,500 ರೂ. ವೆಚ್ಚವಾಗುತ್ತಿತ್ತು. ಇದೀಗ ಸರಕಾರ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದು, ವರ್ಷಕ್ಕೆ 3ಸಾವಿರ ರೂ. ಉಳಿತಾಯ ಆಗುತ್ತದೆ. ಇದರಿಂದ ನಮ್ಮ ಮನೆಯ ಸದಸ್ಯರಿಗೆ ಮತ್ತು ನನಗೆ ಏನಾದರೂ ಕೊಳ್ಳಬಹುದು’
-ಸಂಜನಾ, ಮಹಾರಾಣಿ ಕಾಲೇಜಿನಲ್ಲಿ ವಿದ್ಯಾರ್ಥಿನಿ






.jpg)

