ಉಡುಪಿ ಜಿಲ್ಲೆಯಲ್ಲಿ ಸರಕಾರಿ ಬಸ್ ಸಂಖ್ಯೆ ಹೆಚ್ಚಳಕ್ಕೆ ಸಿಎಂ, ಸಾರಿಗೆ ಸಚಿವರೊಂದಿಗೆ ಚರ್ಚೆ: ಲಕ್ಷ್ಮಿ ಹೆಬ್ಬಾಳ್ಕರ್

ಉಡುಪಿ, ಜೂ.11: ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳ ಸಂಖ್ಯೆ ಅಧಿಕವಿದ್ದು, ಸರಕಾರಿ ಬಸ್‌ಗಳ ಸಂಖ್ಯೆ ಅತ್ಯಂತ ಕಡಿಮೆ ಇದೆ. ಸರಕಾರದ ಶಕ್ತಿ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಜಿಲ್ಲೆಯ ಮಹಿಳೆಯರಿಗೆ ದೊರಕಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಸರಕಾರಿ ಬಸ್‌ಗಳ ಸಂಖ್ಯೆ ಹೆಚ್ಚಿಸುವ ಕುರಿತಂತೆ ಕುರಿತಂತೆ ಸರಕಾರದ ಗಮನ ಸೆಳೆಯುವುದಾಗಿ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಂಗವಿಕಲರು ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ರಾಜ್ಯ ಸರಕಾರದ ಶಕ್ತಿ ಯೋಜನೆಯನ್ನು ಉಡುಪಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಉದ್ಘಾಟಿಸಿ, ಯೋಜನೆಗೆ ಚಾಲನೆ ನೀಡಿ ಸರಕಾರಿ ಕೆಂಪು ಬಸ್ಸಿನಲ್ಲಿ ಮಹಿಳೆಯರೊಂದಿಗೆ ನಗರಕ್ಕೆ ಒಂದು ಸುತ್ತು ಸುತ್ತಿ ಬಂದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.
ಈ ಬಗ್ಗೆ ನಾನು ಜಿಲ್ಲಾಡಳಿತ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಶೀಘ್ರವೇ ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರೊಂದಿಗೆ ಚಿರ್ಚಿಸಿ ಇಲ್ಲಿನ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ಆ ಮೂಲಕ ಯೋಜನೆಯ ಲಾಭ ಜಿಲ್ಲೆಯ ಮಹಿಳೆಯರಿಗೂ ದೊರೆಯುವಂತೆ ಮಾಡಲು ಪ್ರಯತ್ನಿಸುತ್ತೇನೆ ಎಂದರು.
ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳ ಸಂಖ್ಯೆ ಜಾಸ್ತಿ ಇದ್ದು, ಸರಕಾರಿ ಬಸ್‌ಗಳು ತೀರಾ ಕಡಿಮೆ ಇವೆ. ಉಡುಪಿ ಯಲ್ಲಿ ಕೇವಲ 95 ಬಸ್‌ಗಳು ಮಾತ್ರ ಇದ್ದು, ಈ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರೊಂದಿಗೆ ಮಾತನಾಡುತ್ತೇನೆ ಎಂದರು.
ಮಹಿಳೆಯರಿಗೆ ಹಾಗೂ ವಿದ್ಯಾರ್ಥಿನಿಯರಿಗೆ ಅನುಕೂಲ ಕಲ್ಪಿಸುವುದು ನಮ್ಮ ಉದ್ದೇಶವಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ ಸ್ಥಗಿತಗೊಂಡಿರುವ ನರ್ಮ್ ಬಸ್‌ಗಳ ಓಡಾಟವನ್ನು ಪುನರಾರಂಭಿಸಲು ಹಾಗೂ ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಬಸ್‌ಗಳ ಸಂಖ್ಯೆ ಹೆಚ್ಚಳ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಗೃಹಲಕ್ಷ್ಮಿ ಯೋಜನೆ ಜಾರಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ ಜಾರಿಗೊಳ್ಳುವ ಮಹತ್ವಾ ಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯ ರೂಪುರೇಷೆಯ ಕುರಿತಂತೆ ಚರ್ಚೆ ನಡೆಯುತ್ತಿದೆ. ಯೋಜನೆಯನ್ನು ಹೇಗೆ ಅನುಷ್ಠಾನಗೊಳಿಸಬೇಕು ಎಂಬ ಬಗ್ಗೆ ಸಮಾಲೋಚನೆ ನಡೆಯುತ್ತಿದೆ ಎಂದು ಸಚಿವೆ ವಿವರಿಸಿದರು.
ನಾಳೆ ಸಂಜೆಯೊಳಗೆ ಈ ಬಗ್ಗೆ ಖಚಿತ ಮಾಹಿತಿ ಹೊರಬೀಳಲಿದೆ. ನಂತರ ಈ ಬಗ್ಗೆ ಗಜೆಟ್ ನೋಟಿಫಿಕೇಷನ್ ಹೊರಡಿಸುತ್ತೇನೆ. ಇನ್ನೆರಡು ದಿನಗಳೊಳಗೆ ರಾಜ್ಯದ ಜನತೆಗೆ ಯೋಜನೆಯ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದವರು ಹೇಳಿದರು.
ಆ.15ರಂದು ಗೃಹಲಕ್ಷ್ಮೀ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನ ಗೊಳಿಸುವ ಗುರಿಯನ್ನು ಹಾಕಿಕೊಂಡಿದ್ದೇವೆ. ತಪ್ಪಿದರೆ ಆ.17 ಅಥವಾ 18ರಂದು ಖಂಡಿತ ಜಾರಿಗೊಳ್ಳಲಿದೆ. ಶಕ್ತಿಯೋಜನೆಯ ಬಸ್‌ಗಳಿಗೆ ಸ್ಟಿಕ್ಕರ್ ವಿಚಾರವನ್ನು ಸಾರಿಗೆ ಸಚಿವರು ನಿರ್ಧರಿಸುವರು ಎಂದರು.
ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯುವೆ: ಜಿಲ್ಲೆಯಿಂದ ಐವರು ಬಿಜೆಪಿ ಶಾಸಕರೇ ಆಯ್ಕೆಯಾದ ಬಗ್ಗೆ ಪ್ರಶ್ನಿಸಿ ದಾಗ, ರಾಜ್ಯದಲ್ಲಿ ಸವಾಲುಗಳನ್ನು ಮೆಟ್ಟಿ ನಿಲ್ಲುವುದು ಸ್ಮಾರ್ಟ್‌ನೆಸ್. ಜಿಲ್ಲೆಯ ಅಭಿವೃದ್ಧಿಗೆ ಎಲ್ಲಾ ಶಾಸಕರ ಸಹಕಾರ ಕೋರಿದ್ದೇನೆ. ನಾನು ಉಡುಪಿ ಜಿಲ್ಲೆಯನ್ನು ಅಭಿವೃದ್ಧಿಯತ್ತ ತೆಗೆದು ಕೊಂಡು ಹೋಗಲು ಬಂದಿದ್ದೇನೆ ಎಂದರು.
ಸಿದ್ದರಾಮಯ್ಯ, ಡಿಕೆಶಿ ಸರಕಾರಕ್ಕೆ ಒಳ್ಳೆಯ ಹೆಸರು ಬರುವಂತೆ ಮಾಡುವುದು ನನ್ನ ಗುರಿ. ನನ್ನ ಮೇಲೆ ಭರವಸೆ ಇಟ್ಟು ಮಹಿಳೆಯೊಬ್ಬರನ್ನು ಜಿಲ್ಲೆಗೆ ಉಸ್ತುವಾರಿ ಸಚಿವರನ್ನಾಗಿ ಮಾಡಿದ್ದಾರೆ. ಹೀಗಾಗಿ ಜಿಲ್ಲೆಯ ಅಭಿವೃದ್ಧಿ ಯತ್ತ ನನ್ನ ಗಮನ ಇರುತ್ತದೆ. ಇದರೊಂದಿಗೆ ಜಿಲ್ಲಾ ಕಾಂಗ್ರೆಸ್‌ನ್ನು ಸಂಘಟಿ ಸುವ ಜವಾಬ್ದಾರಿಯೂ ಇದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ನುಡಿದರು.
ಶೋಭಾ ಪ್ರಶಂಸೆ
ತನಗೂ ಫ್ರಿ ಬಸ್ ಪಾಸ್ ಎನ್ನುವುದು ಕಾಂಗ್ರೆಸ್‌ನ ದುರಹಂಕಾರ ಎಂದಿರುವುದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೇಳಿಕೆಯತ್ತ ಸಚಿವೆಯ ಗಮನ ಸೆಳೆದಾಗ, ಶೋಭಾ ಕರಂದ್ಲಾಜೆ ಅವರು ಶಕ್ತಿ ಯೋಜನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.
ಯೋಜನೆಗೆ ಹಸಿರು ನಿಶಾನೆ ತೋರಿಸಿದ ಸಚಿವೆ
ಶಕ್ತಿ ಯೋಜನೆಗೆ ಹಸಿರು ನಿಶಾನೆ ತೋರಿಸಿದ ಸಚಿವರು, ತಾವು ಸಹ ಬಸ್ ಏರಿ ಬಸ್‌ನಲ್ಲಿದ್ದ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣದ ಟಿಕೆಟ್ ಹಾಗೂ ಗುಲಾಬಿ ವಿತರಿಸಿದರು.
ಬಸ್‌ನಲ್ಲಿದ್ದ ಪ್ರಯಾಣಿಕರೊಂದಿಗೆ ನಗರದೊಳಗೆ ಬಸ್‌ನಲ್ಲಿ ಒಂದು ಸುತ್ತು ಸಂಚರಿಸಿ ಬಂದರು. ಅದೇ ಬಸ್ ನಲ್ಲಿದ್ದ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹಣ ನೀಡಿ ಟಿಕೆಟ್ ಪಡೆದು ಪ್ರಯಾಣಿಸಿದರು.

