ಕಡಲ್ಕೊರೆತದಿಂದ ಮನೆ ಕಳೆದುಕೊಂಡ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ: ದ.ಕ. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್

ಉಳ್ಳಾಲ: ತೀವ್ರ ಕಡಲ್ಕೊರೆತದಿಂದ ಮನೆ ಕಳೆದುಕೊಂಡ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಮತ್ತು ಕಡಲ್ಕೊರೆತ ತಡೆಗೆ ತಾತ್ಕಾಲಿಕ ಪರಿಹಾರ ವ್ಯವಸ್ಥೆ ಶೀಘ್ರ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಜಿಲ್ಲಾಧಿಕಾರಿ ರವಿಕುಮಾರ್ ಅವರಿಗೆ ಸೂಚಿಸಿದ್ದಾರೆ.
ಅವರು ಉಚ್ಚಿಲ ಬಟ್ಟಪ್ಪಾಡಿ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತೀರ್ವ ಕಡಲ್ಕೋರೆತದಿಂದ ಮನೆ ಕಳೆದುಕೊಂಡ ರಾಜೀವಿ ಅವರಿಗೆ ಪರಿಹಾರ ವ್ಯವಸ್ಥೆ ಮಾಡಬೇಕು. ಸಮುದ್ರ ಪಾಲಾಗದೇ ಅಪಾಯ ಅಂಚಿನಲ್ಲಿರುವ ಮನೆಗಳಿಗೆ ಭದ್ರತೆ ವ್ಯವಸ್ಥೆ ಆಗಬೇಕು. ಮನೆಗಳು ಸಮುದ್ರ ಪಾಲಾಗುವು ದನ್ನು ತಪ್ಪಿಸಲು ಮುನ್ನೆಚ್ಚರಿಕೆ ಕ್ರಮವಾಗಿ ತಡೆಗೋಡೆ ಕಾಮಗಾರಿ ಆರಂಭ ದಲ್ಲಿ ತಾತ್ಕಾಲಿಕ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರ ಅವರು, ಮಳೆಗಾಲ ಮುಗಿದ ಬಳಿಕ ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗುವುದನ್ನು ತಡೆಗಟ್ಟಲು ಶಾಶ್ವತ ತಡೆಗೋಡೆ ನಿರ್ಮಾಣ ಆಗಬೇಕು. ಕೇವಲ ಭರವಸೆ ಮಾತ್ರ ನೀಡದೇ ಕಾಮಗಾರಿ ಶೀಘ್ರ ಆರಂಭಿಸುವಂತೆ ಸೂಚಿಸಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಟ್ಟಪ್ಪಾಡಿಯಲ್ಲಿ ಕಡಲ್ಕೊರೆತ ತೀವ್ರ ಗೊಂಡಿದ್ದು ಗಮನಕ್ಕೆ ಬಂದಿದೆ. ಕಡಲ್ಕೊರೆತದಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡಲು ಮತ್ತು ಜಾಗ ಕಳೆದು ಕೊಂಡವರಿಗೆ ಪ್ರತ್ಯೇಕ ಜಾಗ ನೀಡಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಆದೇಶ ನೀಡಿದ್ದೇನೆ. ಸದ್ಯಕ್ಕೆ ಕಡಲ್ಕೊರೆತ ತಡೆಗಟ್ಟಲು ತಾತ್ಕಾಲಿಕ ತಡೆಗೋಡೆ ಕಾಮಗಾರಿ ಮಾಡಿ ಜನರನ್ನು ರಕ್ಷಣೆ ಮಾಡಬೇಕು. ಮಳೆ ಬಿಟ್ಟ ವೇಳೆ ಕಾಮಗಾರಿ ಶುರು ಮಾಡಬೇಕು. ಮಳೆಗಾಲ ಮುಗಿದ ಬಳಿಕ ಶಾಶ್ವತ ಕಾಮಗಾರಿ ಮಾಡಿ ದೊಡ್ಡ ಅನಾಹುತ ಆಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ತೀವ್ರಗೊಂಡ ಕಡಲ್ಕೊರೆತ: ಕಳೆದ ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಬಟ್ಟಪ್ಪಾಡಿ, ಸೀಗ್ರೌಂಡ್ ನಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಹಲವು ಮನೆಗಳು ಅಪಾಯ ಅಂಚಿನಲ್ಲಿದೆ. ಬಟ್ಟಪ್ಪಾಡಿಯಲ್ಲಿ ಕೊಡಲು ರಸ್ತೆ ದಾಟಿ ಬಂದಿದೆ. ಕಳೆದ ಬಾರಿ ಅಪಾಯ ಅಂಚಿನಲ್ಲಿದ್ದ ಗೆಸ್ಟ್ ಹೌಸ್ ಸಮುದ್ರ ಪಾಲಾಗಿದೆ. ಇದರಿಂದ ಈ ಕಡಲ ಪ್ರದೇಶದಲ್ಲಿ ವಾಸ ಮಾಡುವ ಜನರು ಭೀತಿಯಿಂದ ಬದುಕಬೇಕಾದ ಪರಿಸ್ಥಿತಿ ಬಂದಿದೆ. ಕಳೆದ ಬಾರಿ ಕಡಲ್ಕೊರೆತ ತೀವ್ರ ಗೊಂಡ ಸಂದರ್ಭದಲ್ಲಿ ಆಗಿನ ಮುಖ್ಯಮಂತ್ರಿ ಬೊಮ್ಮಾಯಿ ಭೇಟಿ ನೀಡಿ ಪರಿಹಾರ ಕಾರ್ಯಗಳ ಬಗ್ಗೆ ಭರವಸೆ ನೀಡಿದ್ದರು. ಮತ್ತೆ ಅವರು ಕಾರ್ಯ ರೂಪಕ್ಕೆ ತರದ ಕಾರಣ ಈ ಬಾರಿ ಕಡಲ್ಕೊರೆತ ಹಾನಿ ತೀವ್ರ ಗೊಂಡಿದೆ ಎಂದು ತಿಳಿಸಿದರು.