ಪಾಕಿಸ್ತಾನದಲ್ಲಿ ಬಿರುಗಾಳಿ, ಮಳೆ: 8 ಮಕ್ಕಳ ಸಹಿತ 27 ಮಂದಿ ಮೃತ್ಯು

ಇಸ್ಲಮಾಬಾದ್, ಜೂ.11: ವಾಯವ್ಯ ಪಾಕಿಸ್ತಾನದಲ್ಲಿ ಸುರಿಯುತ್ತಿರುವ ಬಿರುಗಾಳಿ ಸಹಿತ ಭಾರೀ ಮಳೆಯಿಂದ 8 ಮಕ್ಕಳ ಸಹಿತ ಕನಿಷ್ಟ 27 ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ರವಿವಾರ ಹೇಳಿದ್ದಾರೆ.
ಪೇಷಾವರ ಪ್ರಾಂತದಲ್ಲಿ ಬಿರುಗಾಳಿಯಿಂದ ಮನೆಗಳ ಛಾವಣಿ ಹಾರಿಹೋಗಿದ್ದು ಹಲವು ಮನೆಗಳು ಕುಸಿದಿವೆ. ಕುಸಿದ ಮನೆಗಳ ಮಣ್ಣಿನಡಿ ಕನಿಷ್ಟ 12 ಮಂದಿ ಜೀವಂತ ಸಮಾಧಿಯಾಗಿದ್ದಾರೆ. ಎಡೆಬಿಡದೆ ಸುರಿಯುತ್ತಿರುವ ಮಳೆ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದೆ ಎಂದು ಪ್ರಾಂತೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಕ್ತಾರ ತೈಮೂರ್ ಅಲಿಖಾನ್ ಹೇಳಿದ್ದಾರೆ.
ಶನಿವಾರ ಖೈಬರ್ ಪಖ್ತೂಂಕ್ವಾ ಪ್ರಾಂತದ 4 ಜಿಲ್ಲೆಗಳಿಗೆ ಬಿರುಗಾಳಿ ಸಹಿತ ಮಳೆ ಅಪ್ಪಳಿಸಿದ್ದು ಬನ್ನು ಜಿಲ್ಲೆಯಲ್ಲಿ 5 ಮಕ್ಕಳ ಸಹಿತ 15 ಮಂದಿ ಮೃತರಾಗಿದ್ದಾರೆ. 200ಕ್ಕೂ ಅಧಿಕ ಜಾನುವಾರುಗಳು ಮೃತಪಟ್ಟಿದ್ದು ಕನಿಷ್ಟ 140 ಮಂದಿ ಗಾಯಗೊಂಡಿದ್ದಾರೆ. ಎಲ್ಲಾ 4 ಜಿಲ್ಲೆಗಳಲ್ಲೂ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದವರು ಹೇಳಿದ್ದಾರೆ.
ಈ ಮಧ್ಯೆ, ಭಾರತದ ಅರಬ್ಬೀ ಸಮುದ್ರದ ಕಡೆಯಿಂದ ಚಂಡಮಾರುತ ದಕ್ಷಿಣ ಪಾಕಿಸ್ತಾನದತ್ತ ಮುಂದುವರಿದಿದ್ದು ಈ ವಾರ ಸಿಂಧ್ ಪ್ರಾಂತದಲ್ಲಿ ಗಂಟೆಗೆ 100 ಕಿ.ಮೀ ವೇಗದ ಗಾಳಿಯೊಂದಿಗೆ ಭಾರೀ ಮಳೆ ಸುರಿಯಲಿದೆ. ಜೂನ್ 17ರವರೆಗೆ ಮೀನುಗಾರರು ಕಡಲಿನ ಆಳಕ್ಕೆ ತೆರಳಬಾರದು ಎಂದು ಹವಾಮಾನ ಇಲಾಖೆ ಮತ್ತು ಪ್ರಾಂತೀಯ ವಿಪತ್ತು ನಿರ್ವಹಣಾ ವಿಭಾಗ ಎಚ್ಚರಿಕೆ ನೀಡಿದೆ.