ಈ ದೇಶದ ಜನರಿಗೆ ಬಿಜೆಪಿಗೆ ಪರ್ಯಾಯವನ್ನು ಒದಗಿಸುವ ಜವಾಬ್ದಾರಿ ನಮಗಿದೆ: ಶರದ್ ಪವಾರ್

ಹೊಸದಿಲ್ಲಿ: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪರ್ಯಾಯ ಒದಗಿಸಲು ಪ್ರತಿಪಕ್ಷಗಳು ಉತ್ಸುಕವಾಗಿವೆ. ಪ್ರಧಾನ ಮಂತ್ರಿ ಅಭ್ಯರ್ಥಿ ಯಾರೆಂದು ಬಿಂಬಿಸುವುದು ದೊಡ್ಡ ವಿಷಯವಲ್ಲ ಎಂದು ಎನ್ಸಿಪಿಯ ಮುಖ್ಯಸ್ಥ ಶರದ್ ಪವಾರ್ ಅವರು ಶನಿವಾರ ಹೇಳಿದ್ದಾರೆ.
ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಪಾಟ್ನಾದಲ್ಲಿ ಜೂನ್ 23ರಂದು ಆಯೋಜಿಸಿರುವ ಪ್ರತಿಪಕ್ಷಗಳ ನಾಯಕರ ಸಭೆಯಲ್ಲಿ ತಾನು ಪಾಲ್ಗೊಳ್ಳಲಿದ್ದೇನೆ ಹಾಗೂ ಬಿಜೆಪಿ ವಿರುದ್ಧ ಜಂಟಿಯಾಗಿ ಹೋರಾಡಲು ಶ್ರಮಿಸಲಿದ್ದೇನೆ ಎಂದರು.
‘‘ಪ್ರಧಾನ ಮಂತ್ರಿ ಅಭ್ಯರ್ಥಿ ಯಾರು ಎಂಬ ವಿಷಯ ನಮ್ಮ ಮುಂದೆ ಇಲ್ಲ. 1977ರಲ್ಲಿ ಕೂಡ ಪ್ರಧಾನ ಮಂತ್ರಿ ಎಂದು ಯಾರನ್ನು ಕೂಡ ಬಿಂಬಿಸಿರಲಿಲ್ಲ. ಆಗ ಚುನಾವಣೆಯಲ್ಲಿ ಜನತಾ ಪಕ್ಷ ಜಯ ಗಳಿಸಿತ್ತು. ಮೊರಾರ್ಜಿ ದೇಸಾಯಿ ಅವರನ್ನು ಪ್ರಧಾನ ಮಂತ್ರಿಯಾಗಿ ಆಯ್ಕೆ ಮಾಡಲಾಗಿತ್ತು’’ ಎಂದು ಶರದ್ ಪವಾರ್ ಹೇಳಿದರು.
‘‘1977ರಲ್ಲಿ ಇದು ನಡೆಯುತ್ತದೆ ಎಂದಾದರೆ, ಈಗ ಯಾಕೆ ನಡೆಯಲಾರದು? ಈ ದೇಶದ ಜನರಿಗೆ ಬಿಜೆಪಿಗೆ ಪರ್ಯಾಯವನ್ನು ಒದಗಿಸುವ ಜವಾಬ್ದಾರಿ ನಮಗಿದೆ’’ ಎಂದು ಅವರು ತಿಳಿಸಿದರು.
‘‘ಜನರ ಮುಂದೆ ಪರ್ಯಾಯವನ್ನು ಪ್ರಸ್ತುತಪಡಿಸುವ ಅಗತ್ಯತೆ ಇದೆ. ಒಂದು ವೇಳೆ ನಾವು ಸಂಘಟಿತರಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದರೆ, ನಮಗೆ ಪರ್ಯಾಯವನ್ನು ನೀಡಲು ಸಾಧ್ಯವಾಗಬಹುದು’’ ಎಂದು ಅವರು ಹೇಳಿದರು.
‘‘ಬಿಜೆಪಿ ಹಾಗೂ ಅದರ ಸಹ ಸಂಘಟನೆಗಳು ಹನುಮಾನ್ ಹೆಸರಿನಲ್ಲಿ ಕರ್ನಾಟಕದಲ್ಲಿ ಮಾಡಿದಂತೆ ಮಹಾರಾಷ್ಟ್ರದಲ್ಲಿ ಕೂಡ ಶಾಂತಿಯ ವಾತಾವರಣವನ್ನು ಹದಗೆಡಿಸಿವೆೆ’’ ಎಂದು ಶರದ್ ಪವಾರ್ ಅವರು ಹೇಳಿದರು.







