ಚೀನಾದ ಮಿಲಿಟರಿ, ವಿಜ್ಞಾನಿಗಳಿಂದ ಕೋವಿಡ್ ಸೃಷ್ಟಿ?: ಅಧ್ಯಯನ ತಂಡದ ವರದಿ

ನ್ಯೂಯಾರ್ಕ್: ವಿಶ್ವದಲ್ಲಿ ಕೋವಿಡ್ ಸಾಂಕ್ರಾಮಿಕದ ಅಬ್ಬರ ಆರಂಭವಾದ ಸಂದರ್ಭದಲ್ಲಿ ಚೀನಾದ ಮಿಲಿಟರಿಯೊಂದಿಗೆ ಕೆಲಸ ಮಾಡುತ್ತಿರುವ ವುಹಾನ್ ನ ವಿಜ್ಞಾನಿಗಳು ವಿಶ್ವದ ಅತ್ಯಂತ ಮಾರಣಾಂತಿಕ ಕೊರೋನ ಸೋಂಕುಗಳನ್ನು ಸಂಯೋಜಿಸಿ ಹೊಸ ರೂಪಾಂತರಿತ ವೈರಸ್ ಅನ್ನು ಸೃಷ್ಟಿಸುವ ಕಾರ್ಯದಲ್ಲಿ ತೊಡಗಿದ್ದರು ಎಂದು ಅಧ್ಯಯನ ತಂಡವೊಂದು ವರದಿ ಮಾಡಿದೆ.
ಚೀನಾದ ವಿಜ್ಞಾನಿಗಳು ಅಪಾಯಕಾರಿ ಪ್ರಯೋಗಗಳ ರಹಸ್ಯ ಯೋಜನೆಯನ್ನು ನಡೆಸುತ್ತಿದ್ದರು. ಇದು ವುಹಾನ್ ರೋಗಸೂಕ್ಷ್ಮಾಣುಗಳ ವೈಜ್ಞಾನಿಕ ಅಧ್ಯಯನ ಕೇಂದ್ರದಿಂದ ಸೋರಿಕೆಗೆ ಕಾರಣವಾಯಿತು ಮತ್ತು ಏಕಾಏಕಿ ಕೋವಿಡ್ ಪ್ರಾರಂಭವಾಯಿತು. ಹಲವು ರಹಸ್ಯ ವರದಿ, ನೂರಾರು ದಾಖಲೆಗಳು, ಆಂತರಿಕ ಟಿಪ್ಪಣಿಗಳು, ವೈಜ್ಞಾನಿಕ ಲೇಖನಗಳು ಹಾಗೂ ಇ-ಮೇಲ್ ಪತ್ರವ್ಯವಹಾರವನ್ನು ಆಧರಿಸಿ ಅಧ್ಯಯನ ವರದಿ ತಯಾರಿಸಲಾಗಿದೆ ಎಂದು ‘ದಿ ಸಂಡೇ ಟೈಮ್ಸ್’ ವರದಿ ಮಾಡಿದೆ.
ಸಾಂಕ್ರಾಮಿಕದ ಸೃಷ್ಟಿ, ಪ್ರಸಾರ ಮತ್ತು ಈ ಕುರಿತ ಮಾಹಿತಿ ಮುಚ್ಚಿಡುವಲ್ಲಿ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ(ರೋಗಸೂಕ್ಷ್ಮಾಣುಗಳ ವೈಜ್ಞಾನಿಕ ಅಧ್ಯಯನ ಕೇಂದ್ರ)ವು ತೊಡಗಿಸಿಕೊಂಡಿದೆ ಎಂಬುದು ಹೆಚ್ಚು ಸ್ಪಷ್ಟವಾಗಿದೆ. ಚೀನಾದ ಮಿಲಿಟರಿ ಈ ಪ್ರಯೋಗಗಳಿಗೆ ಆರ್ಥಿಕ ನೆರವು ಒದಗಿಸುತ್ತಿರುವುದರಿಂದ ವಿಜ್ಞಾನಿಗಳ ಸಂಶೋಧನೆಯ ಬಗ್ಗೆ ಯಾವುದೇ ಲೇಖನ ಪ್ರಕಟವಾಗಿಲ್ಲ. ಚೀನಾವು ಜೈವಿಕ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸುತ್ತಿದೆ ಎಂದು ವರದಿ ಹೇಳಿದೆ.
ಸಾರ್ಸ್ ವೈರಸ್ನ ಮೂಲವನ್ನು ಕಂಡುಹಿಡಿಯಲು 2003ರಿಂದ ಸಂಶೋಧನೆ ಆರಂಭಿಸಿದ್ದ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ, ದಕ್ಷಿಣ ಚೀನಾದ ಬಾವಲಿ ಗುಹೆಗಳಿಂದ ಸಂಗ್ರಹಿಸಲಾದ ಕೊರೋನವೈರಸ್ಗಳ ಮೇಲೆ ಅಪಾಯಕಾರಿ ಸಂಶೋಧನೆ ಆರಂಭಿಸಿತು. ಈ ಸಂಶೋಧನೆಯ ಫಲಿತಾಂಶಗಳನ್ನು ಆರಂಭದಲ್ಲಿ ಪ್ರಕಟಿಸಲಾಗಿತ್ತು. 2016ರಲ್ಲಿ ಯುನಾನ್ ಪ್ರಾಂತದ ಮೊಜಿಯಾಂಗ್ನಲ್ಲಿನ ಗಣಿಯಲ್ಲಿ ಕಂಡುಬಂದ ಮೃತದೇಹದಲ್ಲಿ ಸಾರ್ಸ್ ವೈರಸ್ ಅನ್ನು ಹೋಲುವ ಹೊಸ ರೀತಿಯ ಕೊರೋನ ವೈರಸನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದರು.
ಈ ಕುರಿತ ವರದಿಯನ್ನು ಚೀನಾ ಬಹಿರಂಗಪಡಿಸಿಲ್ಲ, ಆದರೆ ಆಗ ಪತ್ತೆಯಾದ ವೈರಸ್ ಈಗ ಕೋವಿಡ್ ಸೋಂಕಿನ ಕುಟುಂಬದಲ್ಲಿ ಉಳಿದಿರುವ ಏಕೈಕ ಸದಸ್ಯರು ಎಂದು ಪರಿಗಣಿಸಲಾಗಿದೆ. ಬಳಿಕ ಈ ವೈರಸ್ ಅನ್ನು ವುಹಾನ್ ಇನ್ಸ್‌ಟಿಟ್ಯೂಟ್‌ಗೆ ಸಾಗಿಸಿ ವಿಜ್ಞಾನಿಗಳ ಕಾರ್ಯವನ್ನು ರಹಸ್ಯವಾಗಿಸಲಾಯಿತು ಎಂದು ವರದಿ ಹೇಳಿದೆ. ವುಹಾನ್ ಇನ್ಸ್‌ಟಿಟ್ಯೂಟ್ 2017ರಿಂದ ಚೀನಾದ ಮಿಲಿಟರಿ ಪರವಾಗಿ ಪ್ರಯೋಗಾಲಯ, ಪ್ರಾಣಿಗಳ ಮೇಲೆ ಪ್ರಯೋಗ ಸಹಿತ ರಹಸ್ಯ ಸಂಶೋಧನೆಯಲ್ಲಿ ತೊಡಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ತನಿಖಾಧಿಕಾರಿಗಳು ಈ ಹಿಂದೆ ವರದಿ ಮಾಡಿದ್ದರು.