ಪ್ರಸವ ಸಂದರ್ಭ ಮೃತಪಟ್ಟ ಶಿಶುವನ್ನು ಕಸದ ತೊಟ್ಟಿಗೆ ಎಸೆದು ಸುಟ್ಟು ಹಾಕಿದ ಆಸ್ಪತ್ರೆ ಸಿಬ್ಬಂದಿ

ರಾಂಚಿ: ಇಲ್ಲಿನ ಗರವಾದ ಮಾಝಿಯಾನ್ ರೆಫರಲ್ ಆಸ್ಪತ್ರೆಯ ಸಿಬ್ಬಂದಿ ಪ್ರಸವ ಸಂದರ್ಭ ಮೃತಪಟ್ಟ ಶಿಶುವನ್ನು ಅದರ ಕುಟುಂಬಕ್ಕೆ ಹಸ್ತಾಂತರಿಸದೆ ಉರಿಯುತ್ತಿರುವ ಕಸದ ತೊಟ್ಟಿಗೆ ಎಸೆದು ಸುಟ್ಟು ಹಾಕಿದ ಘಟನೆ ನಡೆದಿದೆ.
‘‘ನಾವು ಶಿಶುವಿನ ಅಂತಿಮ ವಿಧಿ ವಿಧಾನ ನೆರವೇರಿಸಲು ಬಟ್ಟೆ ತರಲು ಮಾರುಕಟ್ಟೆಗೆ ತೆರಳಿದ್ದೆವು. ಈ ಸಂದರ್ಭ ಆಸ್ಪತ್ರೆಯ ಸಿಬ್ಬಂದಿ ಶಿಶುವಿನ ಮೃತದೇಹವನ್ನು ಉರಿಯುತ್ತಿರುವ ಕಸದ ತೊಟ್ಟಿಗೆ ಎಸೆದಿದ್ದಾರೆ. ಶಿಶು ಜನಿಸಿದ ಗಂಟೆಗಳ ಬಳಿಕ ಈ ಘಟನೆ ನಡೆದಿದೆ’’ ಎಂದು ಕುಟುಂಬ ಹೇಳಿದೆ.
‘‘ನಾವು ಶಿಶುವಿನ ಮೃತದೇಹದ ಬಗ್ಗೆ ಪ್ರಶ್ನಿಸಿದಾಗ ಸಿಬ್ಬಂದಿ, ಶಿಶುವನ್ನು ಕಸದೊಂದಿಗೆ ಸುಟ್ಟು ಹಾಕಿದ್ದೇವೆ ಎಂದು ತಿಳಿಸಿದ್ದರು’’ ಎಂದು ಕುಟುಂಬ ಹೇಳಿದೆ.
‘‘ನಾನು ನನ್ನ ಗರ್ಭಿಣಿ ಮಗಳು ಮಧು ದೇವಿಯನ್ನು ಶನಿವಾರ ಅಪರಾಹ್ನ 3 ಗಂಟೆಗೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೆ. ಒಂದೂವರೆ ಗಂಟೆಗಳ ಬಳಿಕ ಪ್ರಸವದ ಸಂದರ್ಭ ಶಿಶು ಮೃತಪಟ್ಟಿತ್ತು. ಆದರೆ, ಆಸ್ಪತ್ರೆಯ ಸಿಬ್ಬಂದಿ ದೌಲತ್ ದೇವಿಯವರೊಂದಿಗೆ ನಿರ್ಮಲಾ ಕುಮಾರಿ ಹಾಗೂ ಮಂಜು ಕುಮಾರಿ ಸೇರಿ ಶಿಶುವಿನ ಮೃತದೇಹವನ್ನು ಆಸ್ಪತ್ರೆಯ ಕ್ಯಾಂಪಸ್ ನಲ್ಲಿರುವ ಕಸದ ತೊಟ್ಟಿಗೆ ಎಸೆದಿದ್ದಾರೆ.
ಈ ಸಂದರ್ಭ ಕಸದ ತೊಟ್ಟಿಯಲ್ಲಿ ಬೆಂಕಿ ಉರಿಯುತ್ತಿತು. ಶಿಶುವಿನ ಮೃತದೇಹ ಕಸದೊಂದಿಗೆ ಸುಟ್ಟು ಬೂದಿಯಾಯಿತು ಎಂದು ಶಿಶುವಿನ ಅಜ್ಜಿ ರಾಜಮತಿ ದೇವಿ ಹೇಳಿದ್ದಾರೆ.
ಈ ನಡುವೆ ಘಟನೆ ಕುರಿತಂತೆ ಸಿಬ್ಬಂದಿ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿದ್ದಾರೆ. ಘಟನೆ ಕುರಿತಂತೆ ಸಂತಾಪ ವ್ಯಕ್ತಪಡಿಸಿರುವ ಗರವಾ ಸಿವಿಲ್ ಸರ್ಜನ್ ಡಾ. ಅನಿಲ್ ಸಿಂಗ್, ಆಸ್ಪತ್ರೆಯ ಸಿಬ್ಬಂದಿಯ ವರ್ತನೆಯನ್ನು ಅಮಾನವೀಯ ಎಂದು ಹೇಳಿದ್ದಾರೆ.
‘‘ನಿಸ್ಸಂಶಯವಾಗಿ ಇದು ಅಮಾನವೀಯ ಕೃತ್ಯವಾಗಿದೆ. ಈ ಘೋರ ಕೃತ್ಯದಲ್ಲಿ ಭಾಗಿಯಾದವರನ್ನು ಸುಮ್ಮನೆ ಬಿಡುವುದಿಲ್ಲ. ಇದರಲ್ಲಿ ಭಾಗಿಯಾದವರ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು ಹಾಗೂ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು’’ ಎಂದು ಸಿವಿಲ್ ಸರ್ಜನ್ ಡಾ. ಅನಿಲ್ ಸಿಂಗ್ ತಿಳಿಸಿದ್ದಾರೆ.
ಶಿಶುವಿನ ಮೃತದೇಹವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಬೇಕಿತ್ತು ಎಂದು ಅವರು ಹೇಳಿದ್ದಾರೆ. ‘‘ನಮ್ಮ ಆಸ್ಪತ್ರೆಯಲ್ಲಿ ಇಂತಹ ಅಸೂಕ್ಷ್ಮ ಸಿಬ್ಬಂದಿಯ ಅಗತ್ಯ ಇಲ್ಲ. ಅವರನ್ನು ಕೆಲಸದಿಂದ ವಜಾಗೊಳಿಸಲು ಪರಿಶೀಲನೆ ನಡೆಸುತ್ತೇವೆ’’ ಎಂದು ಅವರು ತಿಳಿಸಿದ್ದಾರೆ.
ಮೃತಪಟ್ಟ ನವಜಾತ ಶಿಶುವನ್ನು ಕಸದ ತೊಟ್ಟಿಗೆ ಎಸೆದು ಸುಟ್ಟು ಹಾಕಿರುವುದು ಮಾನವತೆಗೆ ಮಾಡಿದ ಅವಮಾನ. ಈ ಘಟನೆ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಆಸ್ಪತ್ರೆಯ ಉಸ್ತುವಾರಿ ಡಾ. ಗೋವಿಂದ ಸೇಥ್ ಹೇಳಿದ್ದಾರೆ.







