ಫಿಲಿಪ್ಪೀನ್ಸ್: ಜ್ವಾಲಾಮುಖಿ ಭೀತಿಯಿಂದ ಸಾವಿರಾರು ನಾಗರಿಕರ ಸ್ಥಳಾಂತರ

ಮನಿಲಾ: ಫಿಲಿಪ್ಪೀನ್ಸ್ ನ ಮಧ್ಯ ಅಲ್ಬೇಯ್ ಪ್ರಾಂತದಲ್ಲಿರುವ ಮೆಯಾನ್ ಪರ್ವತದಿಂದ ಬಿಸಿಬೂದಿ ಸಹಿತ ಕಲ್ಲಿನ ಚೂರುಗಳು ಭಾರೀ ಪ್ರಮಾಣದಲ್ಲಿ ಸಿಡಿಯುತ್ತಿದ್ದು ಜ್ವಾಲಾಮುಖಿ ಸ್ಫೋಟದ ಸೂಚನೆ ಇದಾಗಿದೆ ಎಂದು ಅಧಿಕಾರಿಗಳು ಎಚ್ಚರಿಸಿದ ಹಿನ್ನೆಲೆಯಲ್ಲಿ ಸಾವಿರಾರು ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.
ರಾಜಧಾನಿ ಮನಿಲಾಕ್ಕೆ ಸುಮಾರು 330 ಕಿ.ಮೀ ದೂರದಲ್ಲಿರುವ ಮೆಯಾನ್, ದೇಶದ 24 ಅತ್ಯಂತ ಸಕ್ರಿಯ ಜ್ವಾಲಾಮುಖಿಗಳಲ್ಲಿ ಒಂದಾಗಿದೆ. ರವಿವಾರ ಬೆಳಗ್ಗಿನವರೆಗಿನ ಕಳೆದ 24 ಗಂಟೆಯ ಅವಧಿಯಲ್ಲಿ ಮೆಯಾನ್ ಪರ್ವತದ ಬಳಿ ಕನಿಷ್ಟ ಒಂದು ಜ್ವಾಲಾಮುಖಿ ಭೂಕಂಪ ದಾಖಲಾಗಿದ್ದು ಬಿಸಿ ಕೆಂಪು ಕಲ್ಲುಗಳು ಪರ್ವತದ ಶಿಖರದಿಂದ ಹೊರಹಾರುತ್ತಿದೆ.
ಬಂಡೆಗಳ ಮಳೆ ಎರಡು ಕಿ.ಮೀ ದೂರದವರೆಗೂ ವ್ಯಾಪಿಸಿದೆ ಮತ್ತು ಸಲ್ಫರ್ ಡೈಆಕ್ಸೈಡ್ ಹೊರಸೂಸುವಿಕೆಯು ಶನಿವಾರ ಮೂರುಪಟ್ಟು ಹೆಚ್ಚಿದೆ ಎಂದು ಫಿಲಿಪ್ಪೀನ್ಸ್ನ ಜ್ವಾಲಾಮುಖಿ ಮತ್ತು ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ. ಮೆಯಾನ್ ಪರ್ವತದ ಬುಡದಲ್ಲಿನ ನಿವಾಸಿಗಳ ಸಹಿತ, ಮೆಯಾನ್ ಪರ್ವತದ ಸಮೀಪದ 12,800 ಜನರನ್ನು ರಕ್ಷಣಾ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ ಎಂದು ನಾಗರಿಕ ಭದ್ರತಾ ಇಲಾಖೆ ಹೇಳಿದೆ.
ಪರ್ವತದಿಂದ ಹೊರಗೆ ಹಾರುತ್ತಿರುವ ಬೂದಿ ಹಾಗೂ ಸಲ್ಫರ್ ಡೈಆಕ್ಸೈಡ್ ಅನಿಲವು ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಅಪಾಯವಿದೆ ಎಂದು ಆರೋಗ್ಯ ಕಾರ್ಯದರ್ಶಿ ಟಿಯೊಡೊರೊ ಹೆರ್ಬೋಸಾ ರವಿವಾರ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.
ಜ್ವಾಲಾಮುಖಿ ಸ್ಫೋಟಿಸಿದರೆ ಹೊಗೆಯ ಸೇವನೆಯು ಶ್ವಾಸಕೋಶದ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಕಳೆದ ಗುರುವಾರ ಹೊರಡಿಸಿದ್ದ 3ರ ಹಂತದ ಎಚ್ಚರಿಕೆ ಸಂದೇಶವನ್ನು ಶನಿವಾರ 5ರ ಹಂತಕ್ಕೆ ಹೆಚ್ಚಿಸಲಾಗಿದೆ ಎಂದು ವರದಿಯಾಗಿದೆ.