ಕರ್ನಾಟಕ ಮುಸ್ಲಿಂ ಜಮಾಅತ್ ಮುಡಿಪು ವಲಯ ವತಿಯಿಂದ ಸ್ಪೀಕರ್ ಯು.ಟಿ.ಖಾದರ್‌ರಿಗೆ ಗೌರವಾರ್ಪಣೆ

ಕೊಣಾಜೆ: ಕರ್ನಾಟಕ ಮುಸ್ಲಿಂ ಜಮಾಅತ್ ಮುಡಿಪು ಝೋನ್ ಇದರ ಆಶ್ರಯದಲ್ಲಿ ಎಸ್ ವೈಎಸ್ ಹಾಗೂ ಎಸ್ಸೆಸ್ಸೆಫ್ ಮುಡಿಪು ಝೋನ್ ಸಹಭಾಗಿತ್ವದಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಪತಿ ಯು.ಟಿ.ಖಾದರ್ ಅವರಿಗೆ ಅಭಿನಂಧನಾ ಸಮಾರಂಭವು ಮುಡಿಪು ಸಮೀಪದ ನಂದರಪಡ್ಪು ಎಸ್ ಕೆ. ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕೆ.ಎಂ.ಜೆ. ಮುಡಿಪು ಝೋನ್ ಅಧ್ಯಕ್ಷ ಹಾಜಿ ಅಲಿ ಕುಂಞಿ ಪಾರೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿದ ಝೈನುಲ್ ಉಲಮಾ ಮಾಣಿ ಉಸ್ತಾದ್ ಮಾತನಾಡಿ, ಯುಟಿ ಖಾದರ್ ಜಾತಿ ಧರ್ಮ ಬೇಧವಿಲ್ಲದೆ ಎಲ್ಲರನ್ನು ಒಂದೇ ರೀತಿ ಗೌರವ ದಿಂದ ನೋಡುವವರು. ಅವರಿಗೆ ಗೌರವದ ಸ್ಪೀಕರ್ ಸ್ಥಾನ ಲಭಿಸಿರುವುದು ನಮ್ಮೆಲ್ಲರಿಗೂ ಸಂತಸವಾಗಿದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸ್ಪೀಕರ್ ಯು.ಟಿ.ಖಾದರ್ ಅವರು, ದ್ವೇಷ ಮುಕ್ತ, ಶಾಂತಿ ಸೌಹಾರ್ದತೆ ಯುತವಾದ ಸಮಾಜ ನಿರ್ಮಾಣ ಮಾಡುವ ಕೆಲಸವನ್ನು ಸರ್ಕಾರ ಮಾಡಲಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ. ನಿಮ್ಮೆಲ್ಲ ರ ಆಶೀರ್ವಾದದಿಂದ ಸ್ಪೀಕರ್ ಸ್ಥಾನವನ್ನು ಅಲಂಕರಿಸುವಂತಾಗಿದೆ ಎಂದರು.
ಸಮಾಜದಲ್ಲಿ ನಾವು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಉತ್ತಮವಾದ ಅವಕಾಶಗಳು ಖಂಡಿತವಾಗಿಯೂ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಯುವ ಸಮುದಾಯ ಉತ್ತಮ ಪರಿಶ್ರಮ, ಪ್ರಯತ್ನಗಳೊಂದಿಗೆ ಅವಕಾಶ ಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಸಮಾಜದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಸಮಾಜಪರ ಕಾರ್ಯ ಗಳೊಂದಿಗೆ ಸೌಹಾರ್ದತೆಯ ಕೊಂಡಿಯಾಗಿ ಮುನ್ನಡೆಯುತ್ತಿದೆ. ಇದು ಕೇವಲ ಮುಸ್ಲಿಂ ಸಮಾಜ ಮಾತ್ರವಲ್ಲ ಎಲ್ಲಾ ಜಾತಿ ವರ್ಗಗಳ ಜನರನ್ನು ಪ್ರೀತಿಸಿ , ಗೌರವಿಸುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ. ಸಾಮರಸ್ಯದ ಸಮಾಜ ನಿರ್ಮಾಣ ಮಾಡುವಲ್ಲಿ ನಮ್ಮೆಲ್ಲರ ಪ್ರಯತ್ನಗಳು ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಡಾ.ಅಬ್ದುಲ್ ರಶೀದ್ ಝೈನಿ ಅಭಿನಂದನಾ ಭಾಷಣ ಮಾಡಿದರು. ಸ್ವಾಗತ ಸಮಿತಿಯ ಅಧ್ಯಕ್ಷರಾದ ಎಸ್.ಕೆ.ಅಬ್ದುಲ್ ಖಾದರ್ ಹಾಜಿ ಅವರು ಸ್ಪೀಕರ್ ಅವರಿಗೆ ಮನವಿ ಪತ್ರ ಸಮರ್ಪಿಸಿದರು. ಎಂ.ಎ. ಬಶೀರ್ ಮುಡಿಪು ಅಭಿನಂದನಾ ಪತ್ರ ವಾಚಿಸಿದರು. ಎಂ.ಎ.ಸಿದ್ದೀಕ್ ಸಖಾಫಿ ಮೂಳೂರು ಸ್ವಾಗತಿಸಿದರು. ಅಬ್ದುಲ್ ರಹಮಾನ್ ಮಂಜನಾಡಿ ವಂದಿಸಿದರು. ಕೆ.ಎಂ.ಕೆ. ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ನ ಮುಡಿಪು ವಲಯದ ಪದಾಧಿಕಾರಿಗಳು ಹಾಗೂ ಮುಖಂಡರು ಭಾಗವಹಿಸಿದ್ದರು.








