ಚೀನಾ: ಸುಂಟರಗಾಳಿಯ ಅಬ್ಬರಕ್ಕೆ ಮೂವರು ಮೃತ್ಯು
ಬೀಜಿಂಗ್: ಪೂರ್ವ ಚೀನಾದಲ್ಲಿ ರವಿವಾರ ಬೀಸಿದ ಸುಂಟರಗಾಳಿಯ ಅಬ್ಬರದಲ್ಲಿ ಕೃಷಿ ಭೂಮಿಗೆ ತೀವ್ರ ಹಾನಿಯಾಗಿದ್ದು ಹಲವೆಡೆ ಮರಗಳು ಉರುಳಿಬಿದ್ದು ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ವುಹು ನಗರದಲ್ಲಿ ಚೆಕ್‌ಪೋಸ್ಟ್‌ಗೆ 450 ಟನ್ ತೂಕದ ಕ್ರೇನ್ ಅಪ್ಪಳಿಸಿದ್ದರಿಂದ ಚೆಕ್‌ಪೋಸ್ಟ್‌ನಲ್ಲಿದ್ದ ಮೂವರು ಭದ್ರತಾ ಸಿಬಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈಶಾನ್ಯದ ಲಿಯಾನಿಂಗ್ ಪ್ರಾಂತದ ವಫಂಗ್‌ಡಿಯಾನ್ ನಗರದಲ್ಲಿ ಆಲಿಕಲ್ಲು ಮಳೆಸುರಿದು ಸುಮಾರು 17,000 ಎಕರೆಗಳಷ್ಟು ಕೃಷಿಭೂಮಿಗೆ ಹಾನಿಯಾಗಿದ್ದು 28 ದಶಲಕ್ಷ ಡಾಲರ್‌ನಷ್ಟು ನಷ್ಟವಾಗಿದೆ. ನಗರದ ಹೊರವಲಯದಲ್ಲಿ ಶನಿವಾರ ಒಂದು ಗಂಟೆಯಲ್ಲಿ 1.8 ಇಂಚುಗಳಷ್ಟು ದಾಖಲೆ ಮಳೆಯಾಗಿದ್ದು ಬಿರುಗಾಳಿಯಿಂದ ಹಲವು ಮನೆಗಳ ಛಾವಣಿಯಲ್ಲಿದ್ದ ಸೋಲಾರ್ ವ್ಯವಸ್ಥೆಗಳು ಹಾರಿಹೋಗಿವೆ.
ಪೂರ್ವ ಚೀನಾದ ಜಿಯಾಂಗ್ಸು ಪ್ರಾಂತದಲ್ಲಿ ಬೃಹತ್ ಮರ ರಸ್ತೆಗೆ ಉರುಳಿದಾಗ ರಸ್ತೆಪಕ್ಕ ನಿಲ್ಲಿಸಿದ್ದ ಹಲವು ವಾಹನಗಳು ಅಪ್ಪಚ್ಚಿಯಾಗಿವೆ. ನೈಋತ್ಯ ಚೀನಾದ ಹಲವು ಪ್ರಾಂತಗಳಲ್ಲಿ ತಗ್ಗುಪ್ರದೇಶಗಳು ಜಲಾವೃತಗೊಂಡಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.





