ಬ್ರಿಜ್‌ಭೂಷಣ್ ರಕ್ಷಣೆಗೆ ಕೇಂದ್ರದ ಯತ್ನ: ವಿನೇಶ್ ಫೋಗಟ್ ಆರೋಪ

ಹೊಸದಿಲ್ಲಿ: ಮಹಿಳಾ ಕುಸ್ತಿಪಟುಗಳ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿಫೆಡರೇಶನ್ ಅಧ್ಯಕ್ಷ , ಬಿಜೆಪಿ ಸಂಸದ ಬ್ರಿಜ್‌ಭೂಷಣ್ ಶರಣ್‌ಸಿಂಗ್ ಅವರನ್ನು ರಕ್ಷಿಸಲು ಕೇಂದ್ರ ಸರಕಾರವು ಯತ್ನಿಸುತ್ತಿದೆಯೆಂದು ಒಲಿಂಪಿಕ್ ಪದಕ ವಿಜೇತೆ ವಿನೇಶ್ ಫೋಗಟ್ ಆಪಾದಿಸಿದ್ದಾರೆ.
ರೈತರ ಪ್ರತಿಭಟನೆಯೊಂದರಲ್ಲಿ ಪಾಲ್ಗೊಳ್ಳಲು ರವಿವಾರ ಪಂಜಾಬ್‌ಗೆ ತೆರಳುತ್ತಿದ್ದ ಸಂದರ್ಭ ಹರ್ಯಾಣದ ಖಾಟ್ಕರ್ ಟೋಲ್‌ಪ್ಲಾಝಾದಲ್ಲಿ ಸುದ್ದಿಗಾರರ ಜೊತೆ ಫೋಗಟ್ ಮಾತನಾಡಿದರು. ಕೇಂದ್ರ ಗೃಹ ಸಚಿವ ಅಮಿತ್‌ಶಾ ಜೊತೆಗೆ ಕುಸ್ತಿಪಟುಗಳ ಮಾತುಕತೆಯ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘‘ ಬ್ರಿಜ್‌ಭೂಷಣ್ ಬಂಧನ ಹೊರತುಪಡಿಸಿ, ಇತರ ಕೆಲವು ಪ್ರಸ್ತಾವಗಳನ್ನು ಅವರು (ಕೇಂದ್ರ ಸರಕಾರ) ನಮ್ಮ ಮುಂದಿಟ್ಟಿದ್ದಾರೆ’ ಎಂದು ಹೇಳಿದರು.
ಬ್ರಿಜ್‌ಭೂಷಣ್ ಬಂಧನ ಇನ್ನೂ ಯಾಕಾಗಿಲ್ಲವೆಂಬ ಪ್ರಶ್ನೆಗೆ, ‘‘ ಆತನ ಬಂಧನ ಯಾಕಾಗಿಲ್ಲವೆಂಬುದನ್ನು ನೀವು ಅಮಿತ್ ಶಾ ಅವರಲ್ಲಿ ಕೇಳಬೇಕು. ಆತ ಎಷ್ಟು ಪ್ರಭಾವಿ ವ್ಯಕ್ತಿಯೆಂದರೆ ಸರಕಾರ ಕೂಡಾ ಆತನನ್ನು ರಕ್ಷಿಸಲು ಯತ್ನಿಸುತ್ತಿದೆ. ಹೀಗಾಗಿ ಆತನನ್ನು ಬಂಧಿಸುವಂತೆ ಮಾಡುವುದು ಅಷ್ಟು ಸುಲಭವಲ್ಲ. ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ’’ ಎಂದರು.
ಬ್ರಿಜ್‌ಭೂಷಣ್ ವಿರುದ್ಧ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆ ಯಾವಾಗ ಕೊನೆಗೊಳ್ಳುವುದೆಂಬುದನ್ನು ಹೇಳಲು ತನಗೆ ಸಾಧ್ಯವಿಲ್ಲವೆಂದು ಫೋಗಟ್ ಸುದ್ದಿಗಾರರಿಗೆ ತಿಳಿಸಿದರು.
‘‘ ನಮ್ಮ ಪ್ರತಿಭಟನೆ ಯಾವಾಗ ಕೊನೆಗೊಳ್ಳುವುದೆಂದು ನಾನು ನಿಮಗೆ ಹೇಳಲಾರೆ. ಆತನ ಬಂಧನವಾದ ದಿನವೇ ನಮ್ಮ ಪ್ರತಿಭಟನೆಯೂ ಕೊನೆಗೊಳ್ಳಲಿದೆ. ಆದರೆ ಒಂದು ವೇಳೆ ನ್ಯಾಯ ವಿಳಂಬವಾಗಿ ದೊರೆತಲ್ಲಿ ಅದಕ್ಕೆ ಏನು ಅರ್ಥವಿದೆ’’ ಎಂದು ಫೋಗಟ್ ಪ್ರಶ್ನಿಸಿದರು.







