ಫ್ಯಾಷನ್ ಶೋನಲ್ಲಿ ಉಕ್ಕಿನ ಕಂಬ ತಲೆ ಮೇಲೆ ಬಿದ್ದು ರೂಪದರ್ಶಿ ಮೃತ್ಯು
ನೊಯ್ಡಾ: ನೊಯ್ಡಾ ಫಿಲ್ಮ್ ಸಿಟಿ ಪ್ರದೇಶದಲ್ಲಿರುವ ಸ್ಟುಡಿಯೊವೊಂದಲ್ಲಿ ಆಯೋಜಿಸಲಾಗಿದ್ದ ಫ್ಯಾಶನ್ ಶೋನಲ್ಲಿ ವೇದಿಕೆ ಮೇಲೆ ಹೆಜ್ಜೆ ಹಾಕುತ್ತಿದ್ದ ರೂಪದರ್ಶಿಯ ಮೇಲೆ ಉಕ್ಕಿನ ಕಂಬ ಬಿದ್ದಿದ್ದರಿಂದ ಆಕೆ ಸ್ಥಳದಲ್ಲೇ ಮೃತಪಟ್ಟು, ಓರ್ವ ಯುವಕ ಗಾಯಗೊಂಡಿರುವ ಘಟನೆ ನಡೆದಿದೆ ಎಂದು ರವಿವಾರ ಪೊಲೀಸರು ತಿಳಿಸಿದ್ದಾರೆ ಎಂದು indiatoday.in ವರದಿ ಮಾಡಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿರುವ ಪೊಲೀಸರು, ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮೃತಪಟ್ಟ ರೂಪದರ್ಶಿಯನ್ನು ವಂಶಿಕಾ ಚೋಪ್ರಾ ಹಾಗೂ ಗಾಯಗೊಂಡ ಯುವಕನನ್ನು ಬಾಬಿ ರಾಜ್ ಎಂದು ಗುರುತಿಸಲಾಗಿದ್ದು, ಈ ಇಬ್ಬರೂ ಫ್ಯಾಶನ್ ಶೋನಲ್ಲಿ ಪಾಲ್ಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯು ರಾತ್ರಿ ಸುಮಾರು 1.30 ಗಂಟೆಗೆ ಸಂಭವಿಸಿದೆ.
ಘಟನೆಯ ಕುರಿತು ಕಾರ್ಯಕ್ರಮದ ಸಂಘಟಕರು ಹಾಗೂ ಘಟನಾ ಸ್ಥಳದಲ್ಲಿ ಲೈಟ್ ಕಂಬವನ್ನು ನಿಯೋಜಿಸಿದ್ದ ವ್ಯಕ್ತಿಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರೂ ಸಂತ್ರಸ್ತರ ಕುಟುಂಬದವರಿಗೆ ಈ ಘಟನೆಯ ಕುರಿತು ಮಾಹಿತಿ ನೀಡಲಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ನೊಯ್ಡಾದ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಶಕ್ತಿ ಅವಸ್ಥಿ, "ನೊಯ್ಡಾ ಫಿಲ್ಮ್ ಸಿಟಿಯಲ್ಲಿ ಆಯೋಜನೆಗೊಂಡಿದ್ದ ಫ್ಯಾಶನ್ ಶೋನಲ್ಲಿ ಲೈಟ್ ಕಂಬ ಬಿದ್ದು ವಂಶಿಕಾ ಚೋಪ್ರಾ ಮೃತಪಟ್ಟಿದ್ದಾರೆ" ಎಂದು ತಿಳಿಸಿದ್ದಾರೆ.