ಮೂಲಗೇಣಿದಾರ ಪರವಾದ ತೀರ್ಪು: ಜೂ.18ರಂದು ಮೂಲಗೇಣಿದಾರ ವಿಶೇಷ ಸಭೆ
ಮಂಗಳೂರು, ಜೂ.12: ರಾಜ್ಯ ಹೈಕೋರ್ಟ್ ಮೂಲಗೇಣಿದಾರರ ಪರವಾದ ತೀರ್ಪು ನೀಡಿರುವುದು ಮೂಲಗೇಣಿದಾರರ ಸುದೀರ್ಘ ಹೋರಾಟಕ್ಕೆ ಇನ್ನಷ್ಟು ಬಲ ನೀಡಿದೆ ಎಂದು ಮೂಲಗೇಣಿ ಒಕ್ಕಲು ರಕ್ಷಣಾ ವೇದಿಕೆಯ ಅಧ್ಯಕ್ಷ ಮ್ಯಾಕ್ಸಿಂ ಡಿಸಿಲ್ವ ಹೇಳಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಉಚ್ಚ ನ್ಯಾಯಾಲಯ ಮೂಲಗೇಣಿದಾರರ ಪರವಾಗಿ ಮೇ 22ರಂದು ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಹೋರಾಟದ ವಿಷಯಗಳ ಕುರಿತಂತೆ ಚರ್ಚಿಸಲು ಜೂ.18ರಂದು ಬೆಳಗ್ಗೆ 9:30ಕ್ಕೆ ನಗರದ ಡಾನ್ ಬಾಸ್ಕೋ ಸಭಾಂಗಣದಲ್ಲಿ ಮೂಲ ಗೇಣಿದಾರರ ಮಹತ್ವದ ಸಭೆ ಕರೆಯಲಾಗಿದೆ. ಈ ವಿಶೇಷ ಮಹಾಸಭೆಯಲ್ಲಿ ನ್ಯಾಯವಾದಿಗಳು ಹಾಗೂ ಜನ ಪ್ರತಿನಿಧಿಗಳು ಕೂಡ ಭಾಗವಹಿಸಿ ಮಾಹಿತಿ ನೀಡಲಿದ್ದಾರೆ. ಸಭೆಯಲ್ಲಿ ಮೂಲಗೇಣಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದವರು ವಿನಂತಿಸಿದರು.
ಕರ್ನಾಟಕ ಸರಕಾರ 2011ರಲ್ಲಿ ಹೊರಡಿಸಿದ ಆದೇಶದ ವಿರುದ್ಧ ಕೆಲವರು ರಾಜ್ಯದ ಹೈಕೋರ್ಟ್‌ನಲ್ಲಿ ಈ ಆದೇಶ ಜಾರಿಗೊಳಿಸದಂತೆ ತಡೆ ಕೋರಿದ್ದರು. ಸುದೀರ್ಘ ವಾದ ವಿವಾದಗಳನ್ನು ಆಲಿಸಿದ ನ್ಯಾಯಾಲಯ ಮೇ 22ರಂದು ತೀರ್ಪನ್ನು ಸರಕಾರದ ಪರವಾಗಿ ಹಾಗೂ ಮೂಲಗೇಣಿದಾರರ ಪರವಾಗಿ ನೀಡಿದೆ. ಇದು ನಮಗೆ ಬಲ ತಂದಿದೆ. ಮೂಲಗೇಣಿದಾರರೆಲ್ಲರೂ ಒಟ್ಟಾದರೆ ತಮ್ಮ ಹಕ್ಕನ್ನು ಪಡೆಯಲು ಸಾಧ್ಯವಿದೆ. 2008ರಲ್ಲಿ ಕೇವಲ 25 ಕುಟುಂಬದ ಸದಸ್ಯರಿಂದ ಪ್ರಾರಂಭವಾದ ಮೂಲಗೇಣಿ ಒಕ್ಕಲು ರಕ್ಷಣಾ ವೇದಿಕೆ 3,500 ಸದಸ್ಯರನ್ನು ಹೊಂದಿದೆ. ಇನ್ನೂ ಲಕ್ಷಾಂತರ ಜನ ಸಂತ್ರಸ್ತರು ಈ ಕಾನೂನು ಜಾರಿಯಾಗುತ್ತೋ ಇಲ್ಲವೋ ಎಂದು ನೇಪಥ್ಯದಲ್ಲಿಯೇ ಕಾಯುತ್ತಿದ್ದಾರೆ ಅವರೆಲ್ಲರೂ ಒಟ್ಟು ಸೇರಬೇಕು ಎಂದರು.
ಈ ಆದೇಶದ ಬಳಿಕವಾದರೂ ಸಂತ್ರಸ್ತ ಮೂಲಗೇಣಿ ಹಾಗೂ ಒಳ ಮೂಲಗೇಣಿದಾರರು ತೆರೆಮರೆಯಿಂದ ಹೊರಗೆ ಬರಬೇಕು. ಜೊತೆಗೆ ವೇದಿಕೆಯ ಪರವಾಗಿ ವಾದ ಮಂಡಿಸಿದ ನ್ಯಾಯವಾದಿಗಳ ವೆಚ್ಚ ಭರಿಸಲು ತಮ್ಮಿಂದಾದಷ್ಟು ನೆರವು ನೀಡಿ ವೇದಿಕೆಯ ಹೊರೆಯನ್ನು ಕಡಿಮೆ ಮಾಡಲು ಸಹಕರಿಸಬೇಕು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತ ಜೆರಾರ್ಡ್ ಟವರ್‍ಸ್, ವೇದಿಕೆಯ ಪದಾಧಿಕಾರಿಗಳಾದ ಎಂ.ಕೆ.ಯಶೋಧರ, ಹ್ಯೂಗ್ ವಾಸ್, ಉಪೇಂದ್ರ ನಾಯಕ್, ಜೋ ಮಾರ್ಟಿಸ್ ಉಪಸ್ಥಿತರಿದ್ದರು.