ಡಾ.ಎಂ.ಮೋಹನ ಆಳ್ವರಿಗೆ ʼಸ್ವರ್ಣ ಸಾಧನಾ ಪ್ರಶಸ್ತಿ': ಜೂ.17ರಂದು ಪುತ್ತೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ

ಪುತ್ತೂರು: ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ವತಿಯಿಂದ ಕೊಡಮಾಡುವ `ಸ್ವರ್ಣ ಸಾಧನಾ ಪ್ರಶಸ್ತಿ'ಗೆ ಶಿಕ್ಷಣ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಸಾಧಕ ಡಾ. ಎಂ. ಮೋಹನ ಆಳ್ವ ಅವರು ಭಾಜನರಾಗಿದ್ದಾರೆ. ಜೂ. 17ರಂದು ಪುತ್ತೂರಿನ ಜೈನ ಭವನದಲ್ಲಿ ಸಂಘದ ವಾರ್ಷಿಕ ಮಹಾಸಭೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನೆ ಮತ್ತು ಹಿರಿಯ ಸದಸ್ಯರಿಗೆ ಗೌರವಾರ್ಪಣೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಬಿ. ಐತ್ತಪ್ಪ ನಾಯ್ಕ್ ತಿಳಿಸಿದ್ದಾರೆ.
ಅವರು ಸೋಮವಾರ ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾರ್ಯಕ್ರಮವನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ವೈ ಶಿವರಾಮಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಿವೃತ್ತ ಪಾಧ್ಯಾಪಕ ಡಾ ಪಂಡಿಕ್ಕಾ ಗಣಪಯ್ಯ ಭಟ್ ಅಭಿನಂದನಾ ಭಾಷಣ ಮಾಡಲಿದ್ದಾರೆ. ಸಂಘದ ಅಧ್ಯಕ್ಷ ಶ್ರೀ ಬಿ. ಎತ್ತಪ್ಪ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಘದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜಿಲ್ಲೆಯ ಸಾಧಕರನ್ನು ಗುರುತಿಸಿ 'ಸ್ವರ್ಣ ಸಾಧನಾ' ಪ್ರಶಸ್ತಿ ಎಂಬ ಹೆಸರಿನಲ್ಲಿ ಕಳೆದ ಎರಡು ವರ್ಷಗಳಿಂದ ನೀಡುತ್ತಿದೆ. ಈ ಪ್ರಶಸ್ತಿಯು ರೂ. 15,000 ನಗದು, ಸ್ಮರಣಿಕೆ, ಸನ್ಮಾನ ಪತ್ರ, ಶಾಲು, ಫಲಪುಷ್ಪಗಳನ್ನೊಳಗೊಂಡಿರುತ್ತದೆ.
ಇದೇ ಸಂದರ್ಭದಲ್ಲಿ ಪದವಿಪೂರ್ವ ಶಿಕ್ಷಣದ ವಾಣಿಜ್ಯ ವಿಭಾಗದಲ್ಲಿ 600ರಲ್ಲಿ 600 ಅಂಕ ಪಡೆದು ರಾಜ್ಯ ಮಟ್ಟದ ವಿಶಿಷ್ಟ ಸಾಧನೆ ಮಾಡಿದ ಆಳ್ವಾಸ್ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ಅನನ್ಯ ಕೆ.ಎ. ಈ ವರ್ಷದ ಎಸ್, ಎಸ್. ಎಲ್. ಸಿ. ಪರೀಕ್ಷೆಯಲ್ಲಿ 625ರಲ್ಲಿ 623 ಅಂಕ ಪಡೆದು ರಾಜ್ಯಕ್ಕೆ ತೃತೀಯ ಸ್ಥಾನ ಪಡೆದ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ ತೆಂಕಿಲದ ವಿದ್ಯಾರ್ಥಿನಿ ಹಿಮಾನಿ ಎ.ಸಿ., ಸಾಂದೀಪನಿ ವಿದ್ಯಾಸಂಸ್ಥೆ ನರಿಮೊಗರು ತೇಜಸ್, ಪ್ರಗತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕಾಣಿಯೂರು ಮಾತ್ರ ಉತ್ತಮ್ ಜಿ. ಇವರನ್ನು ಅಭಿನಂದಿಸಲಾಗುವುದು.
ಸಂಘದಲ್ಲಿ ಸದಸ್ಯರಾಗಿದ್ದು, 2023 ಮಾರ್ಚ್ 31ಕ್ಕೆ 75 ವರ್ಷ ಪೂರ್ಣಗೊಳಿಸಿದ 38 ಜನ ಸದಸ್ಯರು, 80 ವರ್ಷ ಪೂರ್ಣಗೊಳಿಸಿದ 12 ಜನ ಸದಸ್ಯರು, 85 ವರ್ಷ ಪೂರ್ಣಗೊಳಿಸಿದ ಸದಸ್ಯರು- ಹೀಗೆ ಒಟ್ಟು 61 ಜನ ಹಿರಿಯ ಸದಸ್ಯರನ್ನು ಇದೇ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಗುವುದು. ಸನ್ಮಾನ ಕಾರ್ಯಕ್ರಮದ ಬಳಿಕ ಸಂಘದ ವಾರ್ಷಿಕ ಮಹಾಸಭೆಯು ಇದೇ ವೇದಿಕೆಯಲ್ಲಿ ಜರಗಲಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ಪ್ರೊ. ಎಂ. ವತ್ಸಲಾ ರಾಜ್ಞಿಕಾರ್ಯದರ್ಶಿ, ರಾಮದಾಸ್ ಗೌಡ, ಕಾರ್ಯದರ್ಶಿ ತಿರುಮಲೇಶ್ವರ ಭಟ್ ಪಿ, ಕೋಶಾಧಿಕಾರಿ ಶಾಂತಿ ಟಿ ಹೆಗಡೆ ಉಪಸ್ಥಿತರಿದ್ದರು.