ಪ್ರತೀ ಗ್ರಾಮದಲ್ಲೂ ಜಮೀನು ಗುರುತಿಸಿ ಬಡವರಿಗೆ ಹಂಚಿಕೆ: ಶಾಸಕ ಅಶೋಕ್ ರೈ
ಕೆಯ್ಯೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಪುತ್ತೂರು: ಸೂರಿನ ವ್ಯವಸ್ಥೆಗಳಿಲ್ಲದೆ ಸಂಕಷ್ಟ ಅನುಭವಿಸುತ್ತಿರುವ ಅನೇಕ ಮಂದಿ ಗ್ರಾಮೀಣ ಪ್ರದೇಶದಲ್ಲಿದ್ದಾರೆ. ಮನೆಗಾಗಿ ಅನೇಕ ಅರ್ಜಿಗಳು ಗ್ರಾಮೀಣ ಭಾಗದಿಂದ ಬಂದಿದ್ದು, ಪ್ರತೀ ಗ್ರಾಮದಲ್ಲಿ ಎರಡರಿಂದ ಮೂರು ಎಕ್ರೆ ಜಮೀನು ಗುರುತಿಸಿ ಅದನ್ನು ಮನೆ ಇಲ್ಲದ ಬಡವರಿಗೆ ಹಂಚಿಕೆ ಮಾಡುವಲ್ಲಿ ಕ್ರಮಕೈಗೊಳ್ಳಲಾಗುವುದು. ಈಗಾಗಲೇ ಜಮೀನು ಗುರುತಿಸುವಂತೆ ಕಂದಾಯ ಇಲಾಖೆಗೆ ಸೂಚನೆ ನೀಡಿದ್ದೇನೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಪುತ್ತೂರು ತಾಲೂಕಿನ ಕೆಯ್ಯೂರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಎ.ಕೆ ಜಯರಾಮ ರೈ ಅವರ ನಿವಾಸ ದಲ್ಲಿ ಸೋಮವಾರ ನಡೆದ ಕೆಯ್ಯೂರು ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಬೂತ್ ಮಟ್ಟದಲ್ಲಿ ಪಕ್ಷವನ್ನು ಕಟ್ಟುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡಬೇಕಿದೆ. ಅಭಿವೃದ್ಧಿ ಕೆಲಸ ನಾನು ಮಾಡುತ್ತೇನೆ ಅದನ್ನು ಪ್ರಚಾರ ಮಾಡುವ ಮತ್ತು ಇದು ಕಾಂಗ್ರೆಸ್ ಸರಕಾರ ಮಾಡಿದ ಕೆಲಸ ಎಂಬುದನ್ನು ಗ್ರಾಮದ ಮನೆಮನೆಗೂ ತಲುಪಿಸುವ ಕೆಲಸವನ್ನು ಎಲ್ಲಾ ಕಾರ್ಯಕರ್ತರು ಮಾಡಬೇಕು. ಬಾಕಿ ಇರುವ 94ಸಿ, ಅಕ್ರಮ ಸಕ್ರಮ ಕಡತಗಳನ್ನು ಶೀಘ್ರ ವಿಲೇವಾರಿ ಮಾಡಲಿದ್ದು ಗ್ರಾಮಗಳಲ್ಲಿ ಅರ್ಜಿಗಳು ಬಾಕಿ ಇರುವ ಫಲಾನುಭವಿಗಳು ಸ್ಥಳೀಯ ವಲಯ ಮತ್ತು ಬೂತ್ ಅಧ್ಯಕ್ಷರನ್ನು ಸಂಪರ್ಕಿಸಿ ಅವರಲ್ಲಿ ಮಾಹಿತಿ ನೀಡಬೇಕು. ಎಲ್ಲರ ಅರ್ಜಿಗಳನ್ನು ನಯಾ ಪೈಸೆ ಲಂಚವಿಲ್ಲದೆ ಮಾಡಿಕೊಡುತ್ತೇನೆ ಎಂದು ಹೇಳಿದ ಅವರು ವಲಯ ಮತ್ತು ಬೂತ್ ಅಧ್ಯಕ್ಷರ ಮೂಲಕವೇ ಫಲಾನುಭವಿಗಳು ಕಡತಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚನೆಯನ್ನು ನೀಡಿದರು.
ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಪುತ್ತೂರು ಬ್ಲಾಕ್ ಪ್ರದಾನ ಕಾರ್ಯದರ್ಶಿ ಅಮಳ ರಾಮಚಂದ್ರ, ಮೂಖಂಡರಾದ ಫಾರೂಕ್ ಬಾಯಬ್ಬೆ, ದಾಮೋದರ ಪೂಜರಿ, ಸಂತೋಷ್ ರೈ ಇಳಂತಜೆ, ಮೌರಿಶ್ ಮಸ್ಕರೇನಸ್ ಮತ್ತಿತರರು ಉಪಸ್ಥಿತರಿದ್ದರು. ವಲಯ ಕಾಂಗ್ರೆಸ್ ಅಧ್ಯಕ್ಷ ಎ.ಕೆ. ಜಯರಾಮ ರೈ ಸ್ವಾಗತಿಸಿ ವಂದಿಸಿದರು. ದಾಮೋದರ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.
15 ದಿನದಲ್ಲಿ ನೂತನ ಶಾಸಕರ ಕಚೇರಿ ಆರಂಭ: ಶಾಸಕ ರೈ
ಮುಂದಿನ 15 ದಿನದೊಳಗೆ ನನ್ನ ನೂತನ ಕಚೇರಿ ಪುತ್ತೂರಿನಲ್ಲಿ ಪ್ರಾರಂಭವಾಗಲಿದ್ದು ಸರಕಾರಿ ಆಸ್ಪತ್ರೆಯ ಬಳಿ ಇರುವ ಈಗಿನ ಪುಡಾ ಕಟ್ಟಡದಲ್ಲಿ ನೂತನ ಕಚೇರಿ ಕಾರ್ಯಾರಂಭಿಸಲಿದೆ ಎಂದು ಶಾಸಕರಾದ ಅಶೋಕ್ ರೈ ತಿಳಿಸಿದ್ದಾರೆ.
ನೂತನ ಕಚೇರಿಯಲ್ಲಿ ಸಾರ್ವಜನಿಕರ ಸೇವೆಗಾಗಿ 6 ಮಂದಿ ಸಿಬ್ಬಂದಿಯನ್ನು ನೇಮಕ ಮಾಡಲಿದ್ದೇನೆ. ವಿವಿಧ ಇಲಾಖೆಗೆ ಸಂಬಂಧಿಸಿದಂತೆ ಅರ್ಜಿ ಸ್ವೀಕರಿಸಲು, ಮಾಹಿತಿ ನೀಡಲು, ಜನರಿಗೆ ಸ್ಪಂದನೆ ನೀಡಲು ಮತ್ತು ನಗರಸಭಾ ವ್ಯಾಪ್ತಿಯಲ್ಲಿರುವ ಜನರಿಗೆ ಸೇವೆ ಸಲ್ಲಿಸಲು ಬೇರೆ ಬೇರೆ ಕೌಂಟರ್‍ಗಳನ್ನು ಮಾಡಿ ಕಚೇರಿಯಲ್ಲಿ ಸಿಬ್ಬಂದಿ ಸೇವೆ ಸಲ್ಲಿಸಲಿದ್ದಾರೆ. ಕಚೇರಿಗೆ ಬರುವ ಮಂದಿಗೆ ಕಚೇರಿಯಲ್ಲಿ ಶಾಸಕರಿಲ್ಲದೇ ಇದ್ದರೂ ಅವರ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯಬೇಕು ಮತ್ತು ಶಾಸಕರಿಲ್ಲದೇ ಇರುವ ಸಂದರ್ಭದಲ್ಲಿ ಬಂದ ಕೆಲಸ ಆಗಿಲ್ಲ ಎಂದು ಯಾರೂ ನೊಂದು ಕೊಳ್ಳುವಂತಾಗಬಾರದು. ದೂರದ ಊರುಗಳಿಂದ ಶಾಸಕರನ್ನು ಭೇಟಿಯಾಗಲು ಬರುವವರು ತಮ್ಮ ಕೆಲಸ ಆಗದೆ ಯಾರೂ ಬರಿಗೈಯ್ಯಲ್ಲಿ ತೆರಳುವಂತಾಗಬಾರದು ಎಂಬ ಉದ್ದೇಶದಿಂದ ಕಚೇರಿಯಲ್ಲಿ ಎಲ್ಲಾ ಸೇವೆಗಳು ಲಭ್ಯವಾಗಲಿದೆ ಎಂದು ಶಾಸಕರು ತಿಳಿಸಿದ್ದಾರೆ.