‘ಪ್ರವರ್ಗ 2 ಬಿ ಮೀಸಲಾತಿ ಗೊಂದಲ’: ‘ಗೃಹಲಕ್ಷ್ಮೀ’ಗೆ ಮುಸ್ಲಿಮ್ ಮಹಿಳೆಯರು ಅರ್ಹರೇ?

ಬೆಂಗಳೂರು: ರಾಜ್ಯದಲ್ಲಿ ಮುಸ್ಲಿಮರಿಗೆ ಹಿಂದುಳಿದ ವರ್ಗದ ಪ್ರವರ್ಗ 2 ‘ಬಿ’ ಅಡಿಯಲ್ಲಿ ನೀಡಲಾಗುತ್ತಿದ್ದ ಮೀಸ ಲಾತಿಯನ್ನು ಈ ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಹಿಂಪಡೆದಿರುವುದರಿಂದ, ‘ಗೃಹ ಲಕ್ಷ್ಮೀ’ ಯೋಜನೆಗೆ ಅರ್ಜಿ ಸಲ್ಲಿಸಲು ತಾವು ಅರ್ಹರೇ ಅಥವಾ ಅನರ್ಹರೆ ಎಂಬ ಗೊಂದಲ ಮುಸ್ಲಿಮ್ ಸಮುದಾಯದ ಮಹಿಳೆಯರಲ್ಲಿ ಕಾಡುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರವು ಐದು ಗ್ಯಾರಂಟಿಗಳ ಪೈಕಿ ಒಂದು ಗ್ಯಾರಂಟಿ ‘ಶಕ್ತಿ’ ಯೋಜನೆಗೆ ಜೂ.11ರಂದು ಚಾಲನೆ ನೀಡಿದೆ. ಇದರ ಬೆನ್ನಲ್ಲೆ ಎರಡನೇ ಗ್ಯಾರಂಟಿಯಾಗಿ ಗೃಹಲಕ್ಷ್ಮೀ ಯೋಜನೆಗೆ ಅರ್ಹ ಫಲಾನುಭವಿ ಗಳನ್ನು ಆಯ್ಕೆ ಮಾಡಲು ಜೂ.15ರಿಂದ ಅರ್ಜಿ ಆಹ್ವಾನಿಸುವು ದಾಗಿ ಪ್ರಕಟಿಸಿದೆ.
ಆದರೆ, ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡು ತ್ತಿರುವ ಗೃಹಲಕ್ಷ್ಮೀ ಯೋಜನೆಯ ಅರ್ಜಿ ನವೂನೆಯಲ್ಲಿರುವ ‘ಜಾತಿ ಕಾಲಂ’ನಲ್ಲಿ ಎಸ್‌ಸಿ-ಎಸ್‌ಟಿ, ಒಬಿಸಿ ಹಾಗೂ ಇತರ ಎಂದು ಉಲ್ಲೇಖಿಸಲಾಗಿದೆ. ಇದರಿಂದಾಗಿ, ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಮ್ ಮಹಿಳೆಯರು ತಾವು ಒಬಿಸಿ ಆಯ್ಕೆ ಮಾಡಿಕೊಳ್ಳಬೇಕೆ? ಅಥವಾ ಇತರ ವರ್ಗವನ್ನು ಆಯ್ಕೆ ಮಾಡಬೇಕೇ? ಎಂಬ ಗೊಂದಲದಲ್ಲಿ ಸಿಲುಕಿದ್ದಾರೆ.
ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಪಟ್ಟಿ ಯಲ್ಲಿ ಮುಸ್ಲಿಮರು ಪ್ರವರ್ಗ 2ಬಿ ಅಡಿಯಲ್ಲಿ ಬರುತ್ತಿದ್ದರು. ಆದರೆ, ಬಸವರಾಜ ಬೊಮ್ಮಾಯಿ ನೇತೃತ್ವದ ಹಿಂದಿನ ರಾಜ್ಯ ಬಿಜೆಪಿ ಸರಕಾರವು ತನ್ನ ಅವಧಿಯ ಅಂತಿಮ ಸಂಪುಟ ಸಭೆಯಲ್ಲಿ ಮುಸ್ಲಿಮರನ್ನು ಪ್ರವರ್ಗ 2 ‘ಬಿ’ ಯಿಂದ ಕೈಬಿಟ್ಟು, ಆರ್ಥಿಕವಾಗಿ ಹಿಂದುಳಿದಿರುವ ವರ್ಗ(ಇಡಬ್ಲೂಎಸ್)ಕ್ಕೆ ಸೇರಿಸಿ ಸರಕಾರಿ ಆದೇಶ ಹೊರಡಿಸಿತ್ತು.
ಮುಸ್ಲಿಮರ 2ಬಿ ಮೀಸಲಾತಿಯನ್ನು ಹಿಂಪಡೆದಿರುವ ರಾಜ್ಯ ಬಿಜೆಪಿ ಸರಕಾರದ ಕ್ರಮವನ್ನು ಪ್ರಶ್ನಿಸಿ ಈಗಾಗಲೇ ಹಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಸದ್ಯ ನ್ಯಾಯಾಲಯವು ಈ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದೆ.
ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವವರು ಜಾತಿ ಪ್ರಮಾಣ ಪತ್ರವನ್ನು ದಾಖಲೆಯಾಗಿ ಸಲ್ಲಿಸುವುದನ್ನು ಕಡ್ಡಾಯ ಮಾಡಿದ್ದಲ್ಲಿ, ಮುಸ್ಲಿಮರಿಗೆ ಯಾವ ವರ್ಗದಡಿಯಲ್ಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂಬ ಗೊಂದಲ ಸರಕಾರಿ ಅಧಿಕಾರಿಗಳಲ್ಲಿಯೂ ಮೂಡಲಿದೆ. ಈ ಎಲ್ಲ ಗೊಂದಲಗಳಿಗೆ ಸರಕಾರ ಯಾವ ರೀತಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
►► ಸರಕಾರ ಕೂಡಲೇ ಸ್ಪಷ್ಟಪಡಿಸಲಿ
ಗೃಹಲಕ್ಷ್ಮೀ ಅರ್ಜಿ ನಮೂನೆ ಈಗಾಗಲೇ ವೈರಲ್ ಆಗಿದ್ದು, ಇದರಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲಿಮ್ ಸಮುದಾಯದವರು ಎಲ್ಲಿ ನವೂದಿಸಬೇಕು ಎನ್ನುವ ಸ್ಪಷ್ಟತೆ ಇಲ್ಲ. ಹೀಗಾಗಿ, ರಾಜ್ಯ ಸರಕಾರ ಈ ಕೂಡಲೇ ಈ ಬಗ್ಗೆ ಸ್ಪಷ್ಟನೆ ನೀಡಿ ಸುತ್ತೋಲೆ ಹೊರಡಿಸಬೇಕು. ಇಲ್ಲದಿದ್ದರೆ, ಈ ಸಮುದಾಯದ ಮಹಿಳೆಯರಲ್ಲಿ ಗೊಂದಲ ನಿವಾರಣೆ ಆಗುವುದಿಲ್ಲ.
-ಅಸ್ಮಾ ಸೈಯದಾ ಬಳ್ಳಾರಿ, ಚಿಂತಕಿ







