ಪ್ರತಿಯೊಂದು ಮಗುವೂ ಶ್ರೇಷ್ಠ : ಪದ್ಮಶ್ರಿ ಪುರಸ್ಕೃತ ಹರೇಕಳ ಹಾಜಬ್ಬ

ಮಂಗಳೂರು: ಪ್ರತಿಯೊಂದು ಮಗುವೂ ಶ್ರೇಷ್ಠವಾಗಿದ್ದು, ಎಲ್ಲರಲ್ಲೂ ಸುಪ್ತ ಪ್ರತಿಭೆ ಇದೆ. ನಾನು ಮಗುವಾಗಿ ಮಕ್ಕಳನ್ನು ಕಂಡದ್ದರಿಂದ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಸಾಧ್ಯವಾಯಿತು ಎಂದು ಪದ್ಮಶ್ರಿ ಪುರಸ್ಕೃತ ಶಿಕ್ಷಣಪ್ರೇಮಿ ಹರೇಕಳ ಹಾಜಬ್ಬ ಹೇಳಿದ್ದಾರೆ.
ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ನಡೆದ ಸ್ವರೂಪ ಸಾಧನ ಶಿಕ್ಷಣ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಕೇವಲ ಪಠ್ಯ ಪುಸ್ತಕದಿಂದಲೇ ಶಿಕ್ಷಣ ವಿಕಾಸ ಸಾಧ್ಯವಿಲ್ಲ, ಪರ್ಯಾಯವಾಗಿ ಪಠ್ಯೇತರ ಚಟುವಟಿಕೆಗಳ ತರಬೇತಿ, ಪರಿಸರ ಜ್ಞಾನ, ಸಂಸ್ಕೃತಿಯ ಪರಿಚಯವಾಗುವುದು ಅಗತ್ಯ. ವಿದ್ಯಾರ್ಥಿಗಳಿಗೆ ಹೆಚ್ಚಿನ ಒತ್ತಡ ನೀಡದೆ ಪ್ರೀತಿಯಿಂದ ಶಿಕ್ಷಣ ನೀಡುವ ವ್ಯವಸ್ಥೆಯಾಗಬೇಕು. ಇಂದು ಸ್ವರೂಪ ಅಧ್ಯಯನ ಕೇಂದ್ರದ ಮೂಲಕ ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗೆ ಪೂರಕವಾದ ಕಾರ್ಯಕ್ರಮಗಳು ನಡೆಯುತ್ತಿರುವುದು ಸಂತಸ ತಂದಿದೆ ಎಂದರು.
ಪರಿಸರ ಹೋರಾಟಗಾರ ದಿನೇಶ್ ಹೊಳ್ಳ ಮಾತನಾಡಿ, ಇಂದು ಪಠ್ಯದ ಅಂಕಗಳಿಕೆಯಲ್ಲೇ ವಿದ್ಯಾರ್ಥಿಗಳು ಒತ್ತಡ ಅನುಭವಿಸುತ್ತಿದ್ದು, ಸಾಮಾನ್ಯ ಜ್ಞಾನ ಏನೂ ಎಂಬುದನ್ನು ತಿಳಿಯಲು ಸಾಧ್ಯವಾಗುತ್ತಿಲ್ಲ. ಮಕ್ಕಳನ್ನು ಅಂಕಗಳಿಕೆಯೆಂಬ ಪಠ್ಯಬಂಧನದಿಂದ ಮುಕ್ತಗೊಳಿಸಿ, ಸ್ವಚ್ಛಂದದಲ್ಲಿ ವಿಹರಿಸಲು ಬಿಡಬೇಕು. ಈ ಆಶಯ ದೊಂದಿಗೆ ಆರಂಭಗೊಂಡ ಸ್ವರೂಪ ಪರ್ಯಾಯ ಸಂಯೋಜಿತ ಶಿಕ್ಷಣ ಅಧ್ಯಯನ ಕೇಂದ್ರದಲ್ಲಿ ಅದ್ಭುತ ಸಾಧನೆ ಗಳು ನಡೆಯುತ್ತಿದೆ. ಇಲ್ಲಿನ ಶಿಕ್ಷಣ ತರಬೇತಿಯು ಮಕ್ಕಳನ್ನು ಉತ್ತಮ ಜ್ಞಾನವಂತರನ್ನಾಗಿಸುವುದರಲ್ಲಿ ಸಂಶಯವಿಲ್ಲ ಎಂದರು.
ಸ್ವರೂಪ ಸಾಧನ ಶಿಕ್ಷಣ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳು ಅತಿಥಿಗಳಿಗೆ ಗಿಡಗಳನ್ನು ನೀಡಿ ಗೌರವಿಸಿದರು. ನೇತ್ರ ತಜ್ಞ ಡಾ. ಮೋಹನ್ ಕುಮಾರ್, ಸಾಹಿತಿ ಗುರುರಾಜ್ ಮಾರ್ಪಳ್ಳಿ, ಸ್ವರೂಪ ಅಧ್ಯಯನ ಕೇಂದ್ರದ ನಿರ್ದೇಶಕ ಗೋಪಡ್ಕರ್, ರಾಷ್ಟ್ರೀಯ ಅಭಿವೃದ್ಧಿ ಶಿಕ್ಷಣ ಯೋಜನೆಯ ನಿರ್ದೇಶಕ ಕೃಷ್ಣವೇಣಿ ಸೇರಿದಂತೆ ಹಲವರು ಇದ್ದರು. ಸ್ವರೂಪ ಅಧ್ಯಯನ ಕೇಂದ್ರದ ಮುಖ್ಯಸ್ಥೆ ಸುಮಾಡ್ಕರ್‌ಕಾರ್ಯಕ್ರಮ ನಿರೂಪಿಸಿದರು.
"ವಿದ್ಯಾರ್ಥಿಗಳ ಭವಿಷ್ಯಕ್ಕೆ ಪಠ್ಯಪುಸ್ತಕದ ಶಿಕ್ಷಣವೇ ಮಾನದಂಡವಲ್ಲ. ಒತ್ತಡರಹಿತ ಶಿಕ್ಷಣ, ಜ್ಞಾನಸಹಿತ ತರಬೇತಿ, ಜೀವನಕ್ಕೆ ಪೂರಕವಾದ ಶಿಕ್ಷಣವಿದ್ದರೆ ಮಾತ್ರ ಒಂದು ಮಗು ಪರಿಪೂರ್ಣವಾದ ಶಿಕ್ಷಣ ಪಡೆದುಕೊಳ್ಳಲು ಸಾಧ್ಯವಿದೆ. ಇಂತಹ ಶಿಕ್ಷಣವು ಸ್ವರೂಪ ಅಧ್ಯಯನ ಕೇಂದ್ರದಿಂದ ನೀಡುತ್ತಿರುವುದು ಉತ್ತಮ ಕಾರ್ಯ".
-ಗುರುರಾಜ್ ಮಾರ್ಪಳ್ಳಿ, ಸಾಹಿತಿ