ಅಮೆರಿಕ ಮತ್ತದರ ಮಿತ್ರರಾಷ್ಟ್ರಗಳ ನೌಕಾ ಕವಾಯತಿನ ಮೇಲೆ ಚೀನಾ ಯುದ್ದ ವಿಮಾನದ ಕಣ್ಗಾವಲು: ವರದಿ

ಬೀಜಿಂಗ್: ಕಳೆದ ವಾರ ಫಿಲಿಪ್ಪೀನ್ಸ್ ಬಳಿಯ ರುಕ್ಯು ದ್ವೀಪದಲ್ಲಿ ಅಮೆರಿಕ, ಜಪಾನ್, ಫ್ರಾನ್ಸ್ ಮತ್ತು ಕೆನಡಾದ ನೌಕಾಪಡೆ ನಡೆಸಿದ ಸಮರಾಭ್ಯಾಸದ ಮೇಲೆ ತೈವಾನ್ನ ಪೂರ್ವದಲ್ಲಿ ಪೆಸಿಫಿಕ್ ಸಾಗರದ ಮೇಲೆ ವಿಚಕ್ಷಣಾ ವಿಮಾನವನ್ನು ನಿಯೋಜಿಸಿ ಚೀನಾ ಕಣ್ಗಾವಲು ನಡೆಸಿದ ಜತೆಗೆ ಗುಪ್ತಚರ ಮಾಹಿತಿಗಳನ್ನು ಸಂಗ್ರಹಿಸಿದೆ ಎಂದು ಚೀನಾದ ‘ಗ್ಲೋಬಲ್ ಟೈಮ್ಸ್’ ರವಿವಾರ ವರದಿ ಮಾಡಿದೆ.
ಅಮೆರಿಕವು ಯುದ್ಧವಿಮಾನಗಳನ್ನು ಒಳಗೊಂಡ ಎರಡು ಯುದ್ಧನೌಕೆಗಳೊಂದಿಗೆ ಶುಕ್ರವಾರ ಫಿಲಿಪ್ಪೀನ್ಸ್ ಸಮುದ್ರದಲ್ಲಿ ಜಂಟಿ ಸಮರಾಭ್ಯಾಸಕ್ಕೆ ಚಾಲನೆ ನೀಡಿದೆ. ಗುಪ್ತಚರ ಮಾಹಿತಿ ಸಂಗ್ರಹಿಸುವ ವ್ಯವಸ್ಥೆಯನ್ನು ಅಳವಡಿಸಿರುವ ವೈ-9 ಸರಕುಸಾಗಣೆ ವಿಮಾನವನ್ನು ತೈವಾನ್ನ ಪೂರ್ವದ ಆಗಸದಲ್ಲಿ ನಿಯೋಜಿಸಿ ಚೀನಾವು ಈ ಸಮರಾಭ್ಯಾಸದ ಮೇಲೆ ಕಣ್ಗಾವಲು ಇರಿಸಿ, ರಹಸ್ಯ ಮಾಹಿತಿ ಸಂಗ್ರಹಿಸಿರುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.
ಈ ಮಧ್ಯೆ, ಅಮೆರಿಕದ ಎರಡು ಯುದ್ಧವಿಮಾನಗಳು ಗುರುವಾರದಿಂದ ಫಿಲಿಪ್ಪೀನ್ಸ್ ಸಾಗರದ ಭೌಗೋಳಿಕ ರಾಜಕೀಯವಾಗಿ ಪ್ರಮುಖವಾದ ರುಕ್ಯು ದ್ವೀಪದ ಸುತ್ತ ಕಾರ್ಯನಿರ್ವಹಿಸುತ್ತಿವೆ ಎಂದು ಚೀನಾದ ಮೂಲಗಳು ಹೇಳಿವೆ. ಈ ದ್ವೀಪವು ಪೂರ್ವ ಚೀನಾ ಸಮುದ್ರವನ್ನು ಫಿಲಿಪ್ಪೀನ್ ಸಮುದ್ರದಿಂದ ಪ್ರತ್ಯೇಕಿಸುತ್ತದೆ.
ಪೆಸಿಫಿಕ್ ಸಾಗರದಲ್ಲಿ ಗುರುವಾರ ವೈ-9 ವಿಮಾನದ ಚಲನವಲನವನ್ನು ಗಮನಿಸಿರುವುದಾಗಿ ಜಪಾನ್ನ ರಕ್ಷಣಾ ಸಚಿವಾಲಯ ಹೇಳಿದೆ.