ಪುಣೆಯಲ್ಲಿ ವಾರಕರಿಗಳ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ: ಸರಕಾರದ ನಿರಾಕರಣೆ
ಪುಣೆ: ನಗರದಲ್ಲಿ ರವಿವಾರ ವಿಠೋಬ ಭಕ್ತರಾದ ವಾರಕರಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಸರಕಾರ ಮತ್ತು ಪೊಲೀಸರು ಈ ಆರೋಪವನ್ನು ನಿರಾಕರಿಸಿದ್ದಾರೆ.
ಪಂಢರಾಪುರಕ್ಕೆ ವಾರ್ಷಿಕ ಆಷಾಢ ಏಕಾದಶಿ ಯಾತ್ರೆಯ ಸಂದರ್ಭದಲ್ಲಿ ವಾರಕರಿಗಳು ಆಳಂದಿ ಪಟ್ಟಣದಲ್ಲಿಯ ಸಂತ ಜ್ಞಾನೇಶ್ವರ ಮಹಾರಾಜರ ಸಮಾಧಿ ಮಂದಿರವನ್ನು ಪ್ರವೇಶಿಸಲು ಯತ್ನಿಸಿದಾಗ ಈ ಘಟನೆ ನಡೆದಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.
ಪೊಲೀಸರು ಪ್ರತಿ ತಂಡದಲ್ಲಿ 75 ಭಕ್ತರಂತೆ ಮಂದಿರ ಪ್ರವೇಶಕ್ಕೆ ಅವಕಾಶ ನೀಡುತ್ತಿದ್ದರು, ಈ ವೇಳೆ ಕೆಲವರು ಬ್ಯಾರಿಕೇಡ್ ಗಳನ್ನು ಉಲ್ಲಂಘಿಸಿ ಸರದಿಯನ್ನು ತಪ್ಪಿಸಲು ಪ್ರಯತ್ನಿಸಿದ್ದರು. ಪೊಲೀಸರು ಅವರನ್ನು ತಡೆಯಲು ಪ್ರಯತ್ನಿಸಿದಾಗ ಮಾತಿನ ಚಕಮಕಿ ನಡೆದಿತ್ತು ಎಂದು ತಿಳಿಸಿದ ಪಿಂಪ್ರಿ ಚಿಂಚವಾಡ್ ಪೊಲೀಸ್ ಆಯುಕ್ತ ವಿನಯಕುಮಾರ ಚೌಬೆ ಅವರು ಲಾಠಿ ಪ್ರಹಾರದ ಆರೋಪಗಳನ್ನು ತಿರಸ್ಕರಿಸಿದರು.
ಆದರೆ ಪ್ರತಿಪಕ್ಷಗಳು ಸರಕಾರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿವೆ. ಹಿಂದುತ್ವ ಸರಕಾರದ ಸೋಗು ಬಯಲಾಗಿದೆ. ಮುಖವಾಡ ಕಳಚಿ ಬಿದ್ದಿದೆ. ಔರಂಗಝೇಬ್ ಇದಕ್ಕಿಂತ ಭಿನ್ನವಾಗಿದ್ದನೇ? ಮುಘಲರು ಮಹಾರಾಷ್ಟ್ರದಲ್ಲಿ ಪುನರ್ಜನ್ಮವೆತ್ತಿದ್ದಾರೆ ಎಂದು ಶಿವಸೇನೆ (ಠಾಕ್ರೆ ಬಣ) ಸಂಸದ ಸಂಜಯ ರಾವುತ್ ಟ್ವೀಟಿಸಿದ್ದಾರೆ. ಘಟನೆಯನ್ನು ಪೊಲೀಸ್ ದೌರ್ಜನ್ಯ ಎಂದು ಎನ್ಸಿಪಿ ಶಾಸಕ ಛಗನ್ ಭುಜಬಲ್ ಬಣ್ಣಿಸಿದ್ದಾರೆ.
ಗೃಹಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಲಾಠಿಪ್ರಹಾರದ ಆರೋಪವನ್ನು ನಿರಾಕರಿಸಿದ್ದಾರೆ . ಘಟನೆಯನ್ನು ‘ಸಣ್ಣ ಪ್ರಮಾಣದ ಹೊಯ್ಕೈ’ಎಂದು ಅವರು ಬಣ್ಣಿಸಿದ್ದಾರೆ.







