ಗೃಹ ಲಕ್ಷ್ಮೀ ಯೋಜನೆ: ಮುಸ್ಲಿಂ ಮಹಿಳೆಯರ ಮೀಸಲಾತಿ ಗೊಂದಲ ನಿವಾರಣೆಗೆ ಆಗ್ರಹ

ಮಂಗಳೂರು, ಜೂ.12: ರಾಜ್ಯದಲ್ಲಿ ಮುಸ್ಲಿಮರಿಗೆ ಹಿಂದುಳಿದ ವರ್ಗದ ಪ್ರವರ್ಗ 2 ಬಿ ಅಡಿಯಲ್ಲಿ ನೀಡಲಾಗುತ್ತಿದ್ದ ಮೀಸಲಾತಿಯನ್ನು ಈ ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಹಿಂಪಡೆದಿರುವುದರಿಂದ ಗೃಹ ಲಕ್ಷ್ಮೀ ಯೋಜನೆಯ ಅರ್ಜಿ ಸಲ್ಲಿಸಲು ತಾವು ಅರ್ಹರೇ ಅಥವಾ ಅನರ್ಹರೇ ಎಂಬ ಗೊಂದಲ ಮುಸ್ಲಿಂ ಸಮುದಾಯದ ಮಹಿಳೆಯರಲ್ಲಿ ಕಾಡುತ್ತಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಅಲ್‌ಹಾಜ್ ಕೆ.ಎಸ್.ಮೊಹಮ್ಮದ್ ಮಸೂದ್ ಅವರು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
ಈ ಸಂಬಂಧ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತು ವಸತಿ , ವಕ್ಫ್ ಮತ್ತು ಅಲ್ಪ ಸಂಖ್ಯಾತ ಸಚಿವ ಝಮೀರ್ ಅಹ್ಮದ್ ಖಾನ್ ಅವರಿಗೆ ಮನವಿ ಸಲ್ಲಿಸಿ 2 ಬಿ ಮೀಸಲಾತಿ ಗೊಂದಲ ನಿವಾರಣೆಗೆ ಆಗ್ರಹಿಸಿದ್ದಾರೆ.
ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರವು ಐದು ಗ್ಯಾರಂಟಿಗಳ ಪೈಕಿ ಒಂದು ಗ್ಯಾರಂಟಿ ‘ಶಕ್ತಿ’ ಯೋಜನೆಗೆ ಜೂನ್ 11ರಂದು ಚಾಲನೆ ನೀಡಿದೆ. ಇದರ ಬೆನ್ನಲ್ಲೇ ಎರಡನೇ ಗ್ಯಾರಂಟಿಯಾಗಿ ಗೃಹ ಲಕ್ಷ್ಮೀ’ ಯೋಜನೆಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲು ಜೂನ್ 15ರಿಂದ ಅರ್ಜಿ ಆಹ್ವಾನಿಸುವುದಾಗಿ ಪ್ರಕಟಿಸಿದೆ. ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಪಟ್ಟಿಯಲ್ಲಿ ಮುಸ್ಲಿಮರು ಪ್ರವರ್ಗ 2 ಬಿ ಅಡಿಯಲ್ಲಿ ಬರುತ್ತಿರೂ, ಹಿಂದಿನ ಬಿಜೆಪಿ ಸರಕಾರವು ಮುಸ್ಲಿಮರನ್ನು ಪ್ರವರ್ಗ 2 ಬಿ ಯಿಂದ ಕೈ ಬಿಟ್ಟು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ (ಇಡಬ್ಲ್ಯುಎಸ್) ಸೇರಿಸಿ ಸರಕಾರಿ ಆದೇಶ ಹೊರಡಿಸಿತ್ತು. ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವವರು ಜಾತಿ ಪ್ರಮಾಣ ಪತ್ರವನ್ನು ದಾಖಲೆಯಾಗಿ ಸಲ್ಲಿಸುವುದನ್ನು ಕಡ್ಡಾಯ ಮಾಡಿದಲ್ಲಿ ಮುಸ್ಲಿಮರಿಗೆ ಯಾವ ವರ್ಗದಡಿಯಲ್ಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂಬ ಗೊಂದಲ ಮೂಡಲಿದೆ. ಗೃಹ ಲಕ್ಷ್ಮೀ ಅರ್ಜಿಯಲ್ಲಿ ಮುಸ್ಲಿಮರು ಎಲ್ಲಿ ನಮೂದಿಸಬೇಕು ಎನ್ನುವ ಸ್ಪಷ್ಟತೆ ಇಲ್ಲದಿದ್ದರಿಂದ ಮುಸ್ಲಿಂ ಸಮುದಾಯದ ಮಹಿಳೆಯರಲ್ಲಿ ಗೊಂದಲ ಮುಂದುವರಿದಿದೆ. ಅದುದರಿಂದ ಈ ಎಲ್ಲಾ ಗೊಂದಲಗಳಿಗೆ ರಾಜ್ಯ ಸರಕಾರ ಈ ಕೂಡಲೇ ಸ್ಪಷ್ಟನೆ ನೀಡಿ ಸುತ್ತೋಲೆ ಹೊರಡಿಸಬೇಕೆಂದು ಮಸೂದ್ ಅವರು ಆಗ್ರಹಿಸಿದ್ದಾರೆ.