ಉಕ್ರೇನ್ ನಲ್ಲಿ ಪ್ರವಾಹ: 6 ಮಂದಿ ಮೃತ್ಯು, 35 ಮಂದಿ ನಾಪತ್ತೆ

ಕೀವ್: ಕಖೋವ್ಕ ಅಣೆಕಟ್ಟು ಸ್ಫೋಟಗೊಂಡ ಕಾರಣ ಉಕ್ರೇನ್ ನ ಖೆರ್ಸಾನ್ ಪ್ರಾಂತದ ಬಳಿಯ ಹಳ್ಳಿಯಲ್ಲಿ ಪ್ರವಾಹ ಉಂಟಾಗಿದ್ದು ಹಲವು ಮನೆಗಳು ನೀರಿನಡಿ ಮುಳುಗಿದ್ದು ಕನಿಷ್ಟ 6 ಮಂದಿ ಮೃತಪಟ್ಟಿದ್ದಾರೆ. ಹಲವರನ್ನು ರಕ್ಷಿಸಲಾಗಿದ್ದು ಇನ್ನೂ 35 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಚೆರ್ನೋಬಿಲ್ ನಂತರದ ಅತ್ಯಂತ ಭೀಕರ ಪರಿಸರ ದುರಂತ ಇದಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ರಶ್ಯ ನಿಯಂತ್ರಣದಲ್ಲಿರುವ ಕಖೋವ್ಕ ಅಣೆಕಟ್ಟು ಜೂನ್ 6ರಂದು ಸ್ಫೋಟಗೊಂಡಿದ್ದು ಇದಕ್ಕೆ ಎರಡೂ ದೇಶಗಳು(ರಶ್ಯ ಹಾಗೂ ಉಕ್ರೇನ್) ಪರಸ್ಪರರ ವಿರುದ್ಧ ದೋಷಾರೋಪ ಮಾಡುತ್ತಿದ್ದಾರೆ. ಅಣೆಕಟ್ಟು ಸ್ಫೋಟದಿಂದ ನಿಪ್ರೋ ನದಿಯ ಕೆಳಹರಿವಿನ ಪ್ರದೇಶಕ್ಕೆ ಪ್ರವಾಹೋಪಾದಿಯಲ್ಲಿ ನೀರು ನುಗ್ಗಿದ್ದು ಸಾವಿರಾರು ಮಂದಿ ಅಲ್ಲಿಂದ ಪಲಾಯನ ಮಾಡಿದ್ದು ಮಾನವೀಯ ಮತ್ತು ಪರಿಸರ ವಿಪತ್ತಿನ ಭೀತಿ ಎದುರಾಗಿದೆ.
ಖೆರ್ಸಾನ್ ಮತ್ತು ಮಿಕೊಲಾಯಿವ್ ಪ್ರದೇಶದಲ್ಲಿ 77 ನಗರಗಳು ಹಾಗೂ ಗ್ರಾಮಗಳು ನೆರೆನೀರಲ್ಲಿ ಮುಳುಗಿದೆ. ಖೆರ್ಸಾನ್ ವಲಯದಲ್ಲಿ 7 ಮಕ್ಕಳ ಸಹಿತ 35 ಮಂದಿ ನಾಪತ್ತೆಯಾಗಿದ್ದಾರೆ ಎಂದು ಉಕ್ರೇನ್ನ ಆಂತರಿಕ ಸಚಿವ ಇಗೋರ್ ಕ್ಲಿಮೆಂಕೊ ಹೇಳಿದ್ದಾರೆ. ಪ್ರವಾಹದಿಂದಾಗಿ ಖೆರ್ಸಾನ್ ಪ್ರಾಂತದಲ್ಲಿ 5 ಮಂದಿ ಮತ್ತು ಮಿಕೊಲಾಯಿವ್ ಪ್ರಾಂತದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಎರಡೂ ಪ್ರಾಂತದಲ್ಲಿ ಒಟ್ಟು 3,700 ಮಂದಿಯನ್ನು ಸ್ಥಳಾಂತರಿಸಲಾಗಿದೆ.
ಪ್ರವಾಹ ಸಮಸ್ಯೆ ಬಿಗಡಾಯಿಸಿರುವ ಪ್ರದೇಶಗಳಲ್ಲಿ ದೋಣಿಯನ್ನು ಬಳಸಿ ರಕ್ಷಣಾ ಕಾರ್ಯ ಮುಂದುವರಿಸಲಾಗಿದೆ. ಕನಿಷ್ಟ ಮೂರು ಸ್ಮಶಾನಗಳು, ತೈಲ ಸಂಗ್ರಹಣಾ ಟರ್ಮಿನಲ್ಗಳು ಮತ್ತು ತ್ಯಾಜ್ಯದ ಹೊಂಡ ಸೇರಿದಂತೆ ಹಲವು ಅಪಾಯಕಾರಿ ಪ್ರದೇಶಗಳು ನೀರಿನಡಿ ಮುಳುಗಿರುವುದರಿಂದ ಈ ಪ್ರದೇಶದ ಜನರ ಆರೋಗ್ಯ ಮತ್ತು ಪರಿಸರದ ಮೇಲೆ ಭಾರೀ ಪರಿಣಾಮ ಉಂಟಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.