ಖರಗಪುರ ವಿದ್ಯಾರ್ಥಿಯ ಎರಡನೇ ಮರಣೋತ್ತರ ಪರೀಕ್ಷೆ:‘ನರಹತ್ಯೆ’ಗೆ ಕಾರಣವಾದ ಗಾಯಗಳು ಬೆಳಕಿಗೆ

ಕೋಲ್ಕತಾ: ಐಐಟಿ-ಖರಗಪುರ ವಿದ್ಯಾರ್ಥಿ ಫೈಝಾನ್ ಅಹ್ಮದ್ (23) ಅವರ ಎರಡನೇ ಮರಣೋತ್ತರ ಪರೀಕ್ಷೆಯು ಸಾವಿಗೆ ಮೊದಲು ಉಂಟಾಗಿದ್ದ ಗಾಯಗಳನ್ನು ಉಲ್ಲೇಖಿಸಿದ್ದು, ಈ ಗಾಯಗಳು ನರಹತ್ಯೆ (ಕೊಲೆ)ಯ ಸ್ವರೂಪದಲ್ಲಿವೆ ಎಂದು ಬಲ್ಲ ಮೂಲಗಳು ಸೋಮವಾರ ತಿಳಿಸಿವೆ.
ಕಳೆದ ವರ್ಷದ ಅಕ್ಟೋಬರ್ ನಲ್ಲಿ, ಅಹ್ಮದ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕಾಲೇಜು ಹೇಳಿಕೊಂಡ ಬೆನ್ನಿಗೇ ಕಲಕತ್ತಾ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದ ಆತನ ಪೋಷಕರು, ತಮ್ಮ ಮಗನನ್ನು ಕೊಲೆ ಮಾಡಲಾಗಿದೆ ಎಂದು ಪ್ರತಿಪಾದಿಸಿದ್ದರು.
ಕೋಲ್ಕತಾ ಉಚ್ಚ ನ್ಯಾಯಾಲಯವು ನೇಮಕಗೊಳಿಸಿದ್ದ ತಜ್ಞರು ಮೊದಲ ಮರಣೋತ್ತರ ಪರೀಕ್ಷೆಯಲ್ಲಿನ ಹಲವಾರು ಲೋಪಗಳನ್ನು ಬೆಟ್ಟು ಮಾಡಿದ ಬಳಿಕ ಎರಡನೇ ಮರಣೋತ್ತರ ಪರೀಕ್ಷೆಗೆ ನ್ಯಾಯಾಲಯವು ಆದೇಶಿಸಿತ್ತು. ಅಸ್ಸಾಮಿನಲ್ಲಿ ದಫನ ಮಾಡಲಾಗಿದ್ದ ಫೈಝಾನ್ ಮೃತದೇಹವನ್ನು ಮೂರು ವಾರಗಳ ಹಿಂದೆ ಹೊರತೆಗೆಯಲಾಗಿತ್ತು ಮತ್ತು ಅದನ್ನು ಪಶ್ಚಿಮ ಬಂಗಾಳ ಪೊಲೀಸರು ಕೋಲ್ಕತಾಕ್ಕೆ ಸಾಗಿಸಿದ್ದು,ಅಲ್ಲಿ ನ್ಯಾಯಾಲಯದಿಂದ ನೇಮಕಗೊಂಡ ತಜ್ಞರು ಎರಡನೇ ಮರಣೋತ್ತರ ಪರೀಕ್ಷೆಯನ್ನು ನಡೆಸಿದ್ದರು.
ಕೋಲ್ಕತಾ ಉಚ್ಚ ನ್ಯಾಯಾಲಯವು ಪ್ರಕರಣದ ಕಳಪೆ ನಿರ್ವಹಣೆಗಾಗಿ ಐಐಟಿ-ಖರಗಪುರವನ್ನು ತೀವ್ರ ತರಾಟೆಗೆತ್ತಿಕೊಂಡಿತ್ತು. ತಮ್ಮ ಮಗನ ಸಾವಿನ ನಿಜವಾದ ಕಾರಣವನ್ನು ಮುಚ್ಚಿಡಲಾಗಿದೆ ಎಂದೂ ಫೈಝಾನ್ ಪೋಷಕರು ಆರೋಪಿಸಿದ್ದರು.
ಫೈಝಾನ್ ನ ಭಾಗಶಃ ಕೊಳೆತಿದ್ದ ಶವವು ಕಳೆದ ವರ್ಷದ ಅಕ್ಟೋಬರ್ 14ರಂದು ಕ್ಯಾಂಪಸ್ ಆವರಣದಲ್ಲಿಯ ಹಾಸ್ಟೆಲ್ ಕೋಣೆಯಲ್ಲಿ ಪತ್ತೆಯಾಗಿತ್ತು. ಅದು ಆತ್ಮಹತ್ಯೆ ಎಂದು ಹೇಳಿ ಕಾಲೇಜು ಆಡಳಿತವು ಕೈತೊಳೆದುಕೊಂಡಿತ್ತು. ತಮ್ಮ ಮಗ ರ‍್ಯಾಗಿಂಗ್ ಬಲಿಯಾಗಿದ್ದಾನೆ,ಐಐಟಿ ಖರಗಪುರ ತಮ್ಮ ದೂರುಗಳಿಗೆ ಕಿವಿಗೊಟ್ಟಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದ ಪೋಷಕರು, ಅದು ಸ್ಪಷ್ಟವಾಗಿ ಕೊಲೆ ಪ್ರಕರಣವಾಗಿದೆ ಎಂದು ಪ್ರತಿಪಾದಿಸಿದ್ದರು.







