ರಶ್ಯಕ್ಕೆ ಬೆಂಬಲ ಘೋಷಿಸಿದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್
ಪ್ಯೋಂಗ್ಯಾಂಗ್: ತಮ್ಮ ದೇಶ ರಶ್ಯದೊಂದಿಗೆ ನಿಲ್ಲಲಿದೆ ಮತ್ತು ರಶ್ಯಕ್ಕೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಸೋಮವಾರ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ಗೆ ಸಂದೇಶ ರವಾನಿಸಿರುವುದಾಗಿ ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ವರದಿ ಮಾಡಿದೆ.
ರಶ್ಯದ ರಾಷ್ಟ್ರೀಯ ದಿನದಂದು ಪುಟಿನ್ಗೆ ಕರೆಮಾಡಿ ಶುಭಾಷಯ ಕೋರಿದ ಉನ್ ‘ ಶತ್ರುಪಡೆಗಳ ಹೆಚ್ಚುತ್ತಿರುವ ಬೆದರಿಕೆಯನ್ನು ತೊಲಗಿಸಲು ಪುಟಿನ್ ಸರಿಯಾದ ನಿರ್ಧಾರ ಕೈಗೊಂಡಿದ್ದಾರೆ’ ಎಂದರು. ಸಾಮ್ರಾಜ್ಯಶಾಹಿಗಳ ದಬ್ಬಾಳಿಕೆ ಮತ್ತು ನಿರಂಕುಶ ವರ್ತನೆಯ ವಿರುದ್ಧ ತಮ್ಮ ದೇಶದ ಸಾರ್ವಭೌಮ ಹಕ್ಕುಗಳು, ಅಭಿವೃದ್ಧಿ ಮತ್ತು ಹಿತಾಸಕ್ತಿಯ ರಕ್ಷಣೆಯ ಪವಿತ್ರಯುದ್ಧದಲ್ಲಿ ತೊಡಗಿರುವ ರಶ್ಯ ಜನತೆಯನ್ನು ಉತ್ತರ ಕೊರಿಯಾ ಬೆಂಬಲಿಸಲಿದೆ.
ರಶ್ಯವನ್ನು ನಾಶಗೊಳಿಸಲು ಉಕ್ರೇನ್ ನೆಪದಲ್ಲಿ ಅಮೆರಿಕ ನಡೆಸುತ್ತಿರುವ ಛಾಯಾ ಯುದ್ಧ ಮತ್ತು ಉಕ್ರೇನ್ಗೆ ಪಾಶ್ಚಿಮಾತ್ಯ ದೇಶಗಳು ಸೇನಾ ನೆರವು ಘೋಷಿಸಿರುವುದು ಖಂಡನಾರ್ಹವಾಗಿದೆ ಎಂದು ಕಿಮ್ಜಾಂಗ್ ಉನ್ ಹೇಳಿರುವುದಾಗಿ ವರದಿಯಾಗಿದೆ.