ಹರ್ಯಾಣ: ಪ್ರತಿಭಟನಾನಿರತ ರೈತರಿಂದ ದಿಲ್ಲಿ ಹೆದ್ದಾರಿ ತಡೆ

ಹೊಸದಿಲ್ಲಿ: ಸೂರ್ಯಕಾಂತಿ ಬೆಳೆಗೆ ಕನಿಷ್ಠ ಬೆಂಬಲ ಬೆಲೆ (MSP) ಲಭಿಸದಿರುವುದನ್ನು ವಿರೋಧಿಸಿ ಪ್ರತಿಭಟನೆಯನ್ನು ನಡೆಸುತ್ತಿರುವ ಹರ್ಯಾಣದ ರೈತರು ಮುಖ್ಯಮಂತ್ರಿಗಳು ಪ್ರಕಟಿಸಿರುವ ಪರಿಹಾರಕ್ಕೆ ಅತೃಪ್ತಿಯನ್ನು ವ್ಯಕ್ತಪಡಿಸಿ ಸೋಮವಾರ ದಿಲ್ಲಿಗೆ ತೆರಳುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತಡೆಯನ್ನೊಡ್ಡಿದರು. ಕುರುಕ್ಷೇತ್ರ ಜಿಲ್ಲೆಯ ಪಿಪ್ಲಿ ಗ್ರಾಮದಲ್ಲಿ ನಡೆದ ಮಹಾಪಂಚಾಯತ್ನಲ್ಲಿ ರಾಷ್ಟ್ರೀಯ ಹೆದ್ದಾರಿ 44ನ್ನು ತಡೆಯಲು ರೈತರು ನಿರ್ಧರಿಸಿದ್ದರು. ದಟ್ಟಣೆಯನ್ನು ನಿವಾರಿಸಲು ವಾಹನಗಳನ್ನು ದಿಲ್ಲಿ-ಚಂಡಿಗಡ ಮಾರ್ಗದ ಮೂಲಕ ಕಳುಹಿಸಲಾಗುತ್ತಿದೆ.
ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಡ ಹೇರಲು ಹರ್ಯಾಣ, ಪಂಜಾಬ, ಉತ್ತರ ಪ್ರದೇಶ ಮತ್ತು ನೆರೆಯ ರಾಜ್ಯಗಳ ರೈತ ನಾಯಕರು ಪಿಪ್ಲಿ ಧಾನ್ಯ ಮಾರುಕಟ್ಟೆಯಲ್ಲಿ ‘ಎಂಎಸ್ಪಿ ದಿಲಾವೋ, ಕಿಸಾನ್ ಬಚಾವೋ (ಎಂಎಸ್ಪಿ ಕೊಡಿಸಿ, ರೈತನನ್ನು ರಕ್ಷಿಸಿ)’ ಮಹಾಪಂಚಾಯತ್ ಗಾಗಿ ಸಮಾವೇಶಗೊಂಡಿದ್ದರು.
ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರು ಶನಿವಾರ ‘ಭಾವಾಂತರ ಭರಪಾಯಿ (ಬೆಲೆ ವ್ಯತ್ಯಾಸ ಪಾವತಿ) ಯೋಜನೆ ’ಯಡಿ 36,414 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾದ ಸೂರ್ಯಕಾಂತಿಗಾಗಿ 8,528 ರೈತರಿಗೆ 29.13 ಕೋ.ರೂ.ಗಳ ಮಧ್ಯಂತರ ಪರಿಹಾರವನ್ನು ಡಿಜಿಟಲ್ ಮೂಲಕ ಬಿಡುಗಡೆಗೊಳಿಸಿದ್ದರು. ಯೋಜನೆಯಡಿ ಸರಕಾರವು ಎಂಎಸ್ಪಿಗಿಂತ ಕಡಿಮೆ ಬೆಲೆಗೆ ಮಾರಾಟಗೊಂಡ ಪ್ರತಿ ಕ್ವಿಂಟಲ್ ಸೂರ್ಯಕಾಂತಿ ಬೆಳೆಗೆ 1,000 ರೂ.ಗಳ ಮಧ್ಯಂತರ ಪರಿಹಾರವನ್ನು ವಿತರಿಸುತ್ತಿದೆ.
ಪ್ರತಿ ಟನ್ಗೆ 6,400 ರೂ.ಗಳ ಎಂಎಸ್ಪಿಯಲ್ಲಿ ಸೂರ್ಯಕಾಂತಿ ಬೆಳೆಯನ್ನು ಖರೀದಿಸುವಂತೆ ರೈತರು ರಾಜ್ಯ ಸರಕಾರವನ್ನು ಆಗ್ರಹಿಸುತ್ತಿದ್ದಾರೆ.
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳಗಳ ಆರೋಪದಲ್ಲಿ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ಭೂಷಣ ಶರಣ ಸಿಂಗ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಮುಂಚೂಣಿಯಲ್ಲಿರುವ ಒಲಿಂಪಿಯನ್ ಕುಸ್ತಿಪಟು ಬಜರಂಗ ಪುನಿಯಾ ಅವರು ರೈತನಾಯಕ ರಾಕೇಶ ಟಿಕಾಯಿತ್ ಜೊತೆ ಮಹಾಪಂಚಾಯತ್ನಲ್ಲಿ ಪಾಲ್ಗೊಂಡಿದ್ದರು. ಕುಸ್ತಿಪಟುಗಳ ಪ್ರತಿಭಟನೆಯನ್ನು ರೈತರು ಬೆಂಬಲಿಸಿದ್ದರು.







