ಪಾಕಿಸ್ತಾನಕ್ಕೆ ಚಂಡಮಾರುತದ ಭೀತಿ: ತಗ್ಗು ಪ್ರದೇಶಗಳ ನಿವಾಸಿಗಳ ಸ್ಥಳಾಂತರ

ಕರಾಚಿ: ಪಾಕಿಸ್ತಾನಕ್ಕೆ ಮತ್ತೊಂದು ವಿನಾಶಕಾರಿ ಚಂಡಮಾರುತದ ಭೀತಿ ಎದುರಾಗಿದ್ದು ದಕ್ಷಿಣದ ಸಿಂಧ್ ಪ್ರಾಂತದ ಕರಾವಳಿ ಪ್ರದೇಶ ಹಾಗೂ ತಗ್ಗು ಪ್ರದೇಶಗಳ ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಈ ಮಧ್ಯೆ, ದೇಶದಾದ್ಯಂತ ಗುಡುಗು, ಸಿಡಿಲಿನ ಸಹಿತ ಭಾರೀ ಗಾಳಿ, ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಅರಬಿ ಸಮುದ್ರದಲ್ಲಿ ಕೇಂದ್ರೀಕೃತವಾಗಿದ್ದ ಚಂಡಮಾರುತ ರವಿವಾರ ತೀವ್ರ ಸ್ವರೂಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ. ಚಂಡಮಾರುತ ಜೂನ್ 13ರಂದು ಸಿಂಧ್ ಪ್ರಾಂತಕ್ಕೆ ಅಪ್ಪಳಿಸಲಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ. ಹೆಚ್ಚು ತೀವ್ರತೆಯ ಗಾಳಿ,ಮಳೆ, ಗುಡುಗಿನ ನಿರೀಕ್ಷೆಯಿದ್ದು ದುರ್ಬಲ ಕಟ್ಟಡಗಳಿಗೆ ಹಾನಿಯಾಗುವ ನಿರೀಕ್ಷೆಯಿದೆ.
ಆದ್ದರಿಂದ ಕರಾವಳಿ ತೀರದ 10 ಕಿ.ಮೀ ವ್ಯಾಪ್ತಿಯ ಜನರನ್ನು ಅಲ್ಲಿಂದ ಸರಕಾರಿ ಶಾಲೆಗಳಲ್ಲಿ ಹಾಗೂ ಕಚೇರಿಗಳಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ ಶಿಬಿರಕ್ಕೆ ಸ್ಥಳಾಂತರಿಸಲಾಗುವುದು ಎಂದು ಪ್ರಾಧಿಕಾರದ ಅಧಿಕಾರಿ ಹೇಳಿದ್ದಾರೆ. ಕರಾಚಿಯ ಎಲ್ಲಾ ಮೊಬೈಲ್ ಟವರ್ಗಳು ಹಾಗೂ ಗಗನಚುಂಬಿ ಕಟ್ಟಡಗಳ ಮಾರ್ಗದರ್ಶಕ ದೀಪಗಳನ್ನು ಉರಿಸುವಂತೆ, ದೊಡ್ಡ ಜಾಹೀರಾತು ಫಲಕಗಳನ್ನು, ಮಾರ್ಗದ ಬದಿಯ ಕಂಬಗಳನ್ನು ಗಟ್ಟಿಗೊಳಿಸಬೇಕು ಅಥವಾ ಅಲ್ಲಿಂದ ತೆರವುಗೊಳಿಸಬೇಕು ಎಂದು ಸೂಚನೆ ನೀಡಲಾಗಿದೆ.







