ಏಕದಿನ ವಿಶ್ವಕಪ್ ಕರಡು ವೇಳಾಪಟ್ಟಿ: ಅಕ್ಟೋಬರ್ 15ರಂದು ಭಾರತಕ್ಕೆ ಪಾಕಿಸ್ತಾನ ಎದುರಾಳಿ
ಹೊಸದಿಲ್ಲಿ: ಕರಡು ವೇಳಾಪಟ್ಟಿಯ ಪ್ರಕಾರ ಭಾರತವು ಅಕ್ಟೋಬರ್ 8ರಂದು ಚೆನ್ನೈನಲ್ಲಿ ಆಸ್ಟ್ರೇಲಿಯ ವಿರುದ್ಧ ಆಡುವ ಮೂಲಕ 2023ರ ಏಕದಿನ ವಿಶ್ವಕಪ್‌ನಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ. ಒಂದು ವಾರದ ನಂತರ ಅ.15ರಂದು ಬಹು ನಿರೀಕ್ಷಿತ ಭಾರತ ಹಾಗೂ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ನಡುವೆ ಪಂದ್ಯ ನಡೆಯಲಿದೆ.
ಬಿಸಿಸಿಐ ಕರಡು ವೇಳಾಪಟ್ಟಿಯನ್ನು ಐಸಿಸಿಯೊಂದಿಗೆ ಹಂಚಿಕೊಂಡಿದೆ.ಮುಂದಿನ ವಾರದ ಆರಂಭದಲ್ಲಿ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸುವ ಮೊದಲು ಭಾಗವಹಿಸುವ ದೇಶಗಳಿಗೆ ಪ್ರತಿಕ್ರಿಯೆಗಾಗಿ ಇದನ್ನು ಕಳುಹಿಸಲಿದೆ ಎಂದು ಇಎಸ್‌ಪಿಎನ್‌ಕ್ರಿಕ್‌ಇನ್‌ಫೋ ಸೋಮವಾರ ವರದಿ ಮಾಡಿದೆ.
ಆರಂಭಿಕ ಕರಡು ವೇಳಾಪಟ್ಟಿಯ ಪ್ರಕಾರ ಅಕ್ಟೋಬರ್ 5ರಂದು ಹಾಲಿ ಚಾಂಪಿಯನ್ ಇಂಗ್ಲೆಂಡ್ ಕಳೆದ ವರ್ಷದ ರನ್ನರ್ಸ್ ಅಪ್ ನ್ಯೂಝಿಲ್ಯಾಂಡ್ ತಂಡವನ್ನು ಅಹಮದಾಬಾದ್‌ನಲ್ಲಿ ಎದುರಿಸುವುದರೊಂದಿಗೆ ವಿಶ್ವಕಪ್ ಟೂರ್ನಮೆಂಟ್ ಆರಂಭವಾಗಲಿದೆ. ಅಹಮದಾಬಾದ್ ನಗರವು ನವೆಂಬರ್ 19ರಂದು ಫೈನಲ್ ಪಂದ್ಯದ ಆತಿಥ್ಯವನ್ನು ವಹಿಸಲಿದೆ. ನ.15 ಹಾಗೂ 16ರಂದು ನಡೆಯುವ ಸಾಧ್ಯತೆಯಿರುವ ಸೆಮಿ ಫೈನಲ್ ಪಂದ್ಯಗಳ ಸ್ಥಳವನ್ನು ಇನ್ನಷ್ಟೇ ನಿರ್ಧರಿಸಬೇಕಾಗಿದೆ.
ಆತಿಥೇಯ ಭಾರತವು 2011ರಲ್ಲಿ ಸ್ವದೇಶದಲ್ಲಿ ಏಕದಿನ ವಿಶ್ವಕಪ್ ಜಯಿಸಿತ್ತು. ಈ ಬಾರಿ ತನ್ನ ಲೀಗ್ ಹಂತದ ಪಂದ್ಯಗಳನ್ನು ಕೋಲ್ಕತಾ, ಮುಂಬೈ, ಹೊಸದಿಲ್ಲಿ ಹಾಗೂ ಬೆಂಗಳೂರು ಸಹಿತ 9 ನಗರಗಳಲ್ಲಿ ಆಡಲಿದೆ.
ಇದೇ ವೇಳೆ ಪಾಕಿಸ್ತಾನವು ತನ್ನ ಲೀಗ್ ಹಂತದ ಪಂದ್ಯಗಳನ್ನು ಐದು ನಗರಗಳಲ್ಲಿ ಆಡಲಿದೆ.
ಪಾಕಿಸ್ತಾನವು ಹೈದರಾಬಾದ್‌ನಲ್ಲಿ ಅ.6 ಹಾಗೂ 12ರಂದು ಕ್ವಾಲಿಫೈಯರ್ ತಂಡಗಳನ್ನು ಎದುರಿಸಲಿದೆ. ಆ ನಂತರ ಆಸ್ಟ್ರೇಲಿಯವನ್ನು ಬೆಂಗಳೂರಿನಲ್ಲಿ ಅ.20ರಂದು ಎದುರಿಸಲಿದೆ. ಅಫ್ಘಾನಿಸ್ತಾನ(ಅ.23) ಹಾಗೂ ದಕ್ಷಿಣ ಆಫ್ರಿಕಾ(ಅ.27) ವಿರುದ್ಧ ಚೆನ್ನೈನಲ್ಲಿ, ಬಾಂಗ್ಲಾದೇಶವನ್ನು ಕೋಲ್ಕತಾದಲ್ಲಿ(ಅ.31), ನ್ಯೂಝಿಲ್ಯಾಂಡ್ ತಂಡವನ್ನು ಬೆಂಗಳೂರಿನಲ್ಲಿ(ನ.5) ಹಾಗೂ ಇಂಗ್ಲೆಂಡ್ ತಂಡವನ್ನು ಕೋಲ್ಕತಾದಲ್ಲಿ(ಅ.12) ಮುಖಾಮುಖಿಯಾಗಲಿದೆ ಎಂದು ವರದಿಯಾಗಿದೆ.
ಆಸ್ಟ್ರೇಲಿಯವು ತನ್ನ ಸಾಂಪ್ರದಾಯಿಕ ಎದುರಾಳಿ ನ್ಯೂಝಿಲ್ಯಾಂಡ್ ತಂಡವನ್ನು ಅ.29ರಂದು ಧರ್ಮಶಾಲಾದಲ್ಲಿ ಹಾಗೂ ಇಂಗ್ಲೆಂಡ್ ತಂಡವನ್ನು ನ.4ರಂದು ಅಹಮದಾಬಾದ್‌ನಲ್ಲಿ ಎದುರಿಸಲಿದೆ ಎಂದು ವರದಿಯಾಗಿದೆ.
ಎಲ್ಲ 10 ತಂಡಗಳು ಟೂರ್ನಮೆಂಟ್‌ನಲ್ಲಿ ಭಾಗವಹಿಸಲಿವೆ. ಈ ಪೈಕಿ 8 ತಂಡಗಳನ್ನು ಈಗಾಗಲೇ ನಿರ್ಧರಿಸಲಾಗಿದೆ. ಇತರ ಎರಡು ತಂಡಗಳು ಕ್ವಾಲಿಫೈಯರ್ ಮುಖಾಂತರ ಪ್ರಮುಖ ಟೂರ್ನಿಗೆ ತೇರ್ಗಡೆಯಾಗಲಿವೆ.
ಪ್ರಮುಖ ಟೂರ್ನಿ ಆರಂಭವಾಗಲು ಇನ್ನು 4 ತಿಂಗಳಷ್ಟೇ ಬಾಕಿ ಉಳಿದಿದ್ದು, ಅಧಿಕೃತ ವೇಳಾಪಟ್ಟಿ ಬಿಡುಗಡೆಯಲ್ಲಿ ಭಾರೀ ವಿಳಂಬವಾಗುತ್ತಿದೆ. 2015 ಹಾಗೂ 2019ರ ಕಳೆದ ಎರಡು ಆವೃತ್ತಿಯ ಟೂರ್ನಮೆಂಟ್‌ನ ವೇಳಾಪಟ್ಟಿಯನ್ನು ವರ್ಷದ ಮೊದಲೇ ಅಂತಿಮಗೊಳಿಸಲಾಗಿತ್ತು.







