2013ರ ನಂತರ 8 ಪಂದ್ಯ, 8 ಸೋಲು: ಐಸಿಸಿ ನಾಕೌಟ್ ಹಂತದಲ್ಲಿ ಮುಂದುವರಿದ ಭಾರತದ ಕಳಪೆ ಪ್ರದರ್ಶನ

ಹೊಸದಿಲ್ಲಿ: ಆಸ್ಟ್ರೇಲಿಯ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್(ಡಬ್ಲುಟಿಸಿ) ಫೈನಲ್‌ನಲ್ಲಿನ ಸೋಲು ಐಸಿಸಿ ಆಯೋಜಿತ ಟೂರ್ನಿಗಳಲ್ಲಿ ನಾಕೌಟ್ ಪಂದ್ಯಗಳಲ್ಲಿ ಭಾರತದ ಕಳಪೆ ನಿರ್ವಹಣೆಗೆ ಮತ್ತೊಂದು ನಿದರ್ಶನವಾಗಿದೆ.
ಭಾರತವು 2013ರಲ್ಲಿ ಕೊನೆಯ ಬಾರಿ ಐಸಿಸಿ ಟೂರ್ನಮೆಂಟ್‌ನಲ್ಲಿ ಚಾಂಪಿಯನ್ ಆಗಿತ್ತು. ಆಗ ಎಂ.ಎಸ್. ಧೋನಿ ನಾಯಕತ್ವದಲ್ಲಿ ಭಾರತವು ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಆ ನಂತರ ಭಾರತವು ಐಸಿಸಿ ಸ್ಪರ್ಧೆಗಳಲ್ಲಿ 8 ನಾಕೌಟ್ ಪಂದ್ಯಗಳನ್ನು(ಸೆಮಿ ಫೈನಲ್ ಹಾಗೂ ಫೈನಲ್)ಆಡಿದ್ದು, ಎಲ್ಲ 8 ಪಂದ್ಯಗಳಲ್ಲೂ ಸೋಲುಂಡಿದೆ.
ಭಾರತವು ಶ್ರೇಷ್ಠ ಕ್ರಿಕೆಟ್ ಪಂದ್ಯವನ್ನಾಡಿ ಇತರ ಪ್ರಮುಖ ತಂಡಗಳನ್ನು ಸೋಲಿಸಿ ಸೆಮಿ ಫೈನಲ್ ಹಾಗೂ ಫೈನಲ್ ಹಂತಕ್ಕೆ ತಲುಪುತ್ತದೆ. ಆದರೆ ಸೆಮಿಫೈನಲ್ ಇಲ್ಲವೇ ಫೈನಲ್‌ನಲ್ಲಿ ಎಡವುತ್ತದೆ ಎನ್ನುವುದು ಈ ಟ್ರೆಂಡ್‌ನಲ್ಲಿ ಸ್ಪಷ್ಟವಾಗುತ್ತದೆ.
2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ನಂತರ ಭಾರತವು ಐಸಿಸಿ ಟೂರ್ನಿಗಳಲ್ಲಿ 4 ಸೆಮಿ ಫೈನಲ್ ಹಾಗೂ 4 ಫೈನಲ್ ಪಂದ್ಯಗಳಲ್ಲಿ ಕಾಣಿಸಿಕೊಂಡಿದೆ. ಎಲ್ಲ ಪಂದ್ಯಗಳಲ್ಲೂ ಸೋಲಿನ ಕಹಿ ಉಂಡಿದೆ.
2014ರ ಟಿ-20 ವಿಶ್ವಕಪ್ ಫೈನಲ್‌ನಲ್ಲಿ ಸೋಲಿನ ಟ್ರೆಂಡ್ ಆರಂಭವಾಗಿದ್ದು, ಆಗ ಭಾರತವು ಶ್ರೀಲಂಕಾ ವಿರುದ್ಧ 6 ವಿಕೆಟ್‌ಗಳಿಂದ ಸೋಲುಂಡಿತ್ತು. ಐಸಿಸಿ ಸ್ಪರ್ಧೆಯ ನಾಕೌಟ್ ಹಂತಗಳಲ್ಲಿ ಭಾರತ 8 ಪಂದ್ಯಗಳ ಪೈಕಿ ಮೂರು ಪಂದ್ಯಗಳನ್ನು ಟಿ-20 ವಿಶ್ವಕಪ್‌ವೊಂದರಲ್ಲಿ ಸೋತಿದೆ. ತಲಾ ಎರಡು ಪಂದ್ಯಗಳನ್ನು ಏಕದಿನ ವಿಶ್ವಕಪ್ ಹಾಗೂ ಡಬ್ಲುಟಿಸಿ ಫೈನಲ್‌ನಲ್ಲಿ ಸೋತರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಒಂದು ಬಾರಿ ಸೋಲುಂಡಿದೆ.







