‘ಟ್ಯಾಪಿ’ ಗ್ಯಾಸ್ ಪೈಪ್ ಲೈನ್ ನ ಅಫ್ಘಾನ್ ವಿಭಾಗದ ನಿಯಂತ್ರಣಕ್ಕೆ ಹಖಾನಿ ಪ್ರಯತ್ನ: ವಿಶ್ವಸಂಸ್ಥೆ ವರದಿ

ವಿಶ್ವಸಂಸ್ಥೆ: ತುರ್ಕ್ಮೆನಿಸ್ತಾನ್-ಅಫ್ಘಾನಿಸ್ತಾನ್-ಪಾಕಿಸ್ತಾನ್-ಇಂಡಿಯಾ (ಟಿಎಪಿಐ) ಗ್ಯಾಸ್ ಪೈಪ್ ಲೈನ್ ನ ಅಫ್ಘಾನ್ ಭಾಗದ ನಿಯಂತ್ರಣವನ್ನು ತನ್ನ ವಶಕ್ಕೆ ಪಡೆಯಲು ಅಫ್ಘಾನ್ ನ ಆಂತರಿಕ ಸಚಿವ ಸಿರಾಜುದ್ದೀನ್ ಹಖಾನಿ ಮುಂದಾಗಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.
ಹಖಾನಿ ನೆಟ್ವರ್ಕ್ನ ಮುಖಂಡ, ಪ್ರಭಾರೀ ಆಂತರಿಕ ಸಚಿವ ಸಿರಾಜುದ್ದೀನ್ ಹಖಾನಿ ಹಾಗೂ ಪ್ರಥಮ ಉಪಪ್ರಧಾನಿ ಮುಲ್ಲಾ ಬರಾದಾರ್ ನಡುವೆ ಭಿನ್ನಾಭಿಪ್ರಾಯ ಹೆಚ್ಚುತ್ತಿದೆ. ಸರಕಾರದ ಪ್ರಮುಖ ಸ್ಥಾನಗಳನ್ನು ಪಡೆಯುವ ವಿಷಯದಲ್ಲಿ ತಾಲಿಬಾನ್ ಅಧಿಕಾರಿಗಳಲ್ಲಿ ತೀವ್ರ ಭಿನ್ನಾಭಿಪ್ರಾಯವಿದೆ. ಸರಕಾರದಲ್ಲಿ ಬರಾದಾರ್ ಹೆಚ್ಚು ಪ್ರಭಾವಿಯಾಗಿಲ್ಲ, ಆದರೆ ದಕ್ಷಿಣ ಪ್ರಾಂತೀಯ ಆಡಳಿತದ ಬೆಂಬಲ ಅವರಿಗಿದೆ ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಯ 1988 ತಾಲಿಬಾನ್ ನಿರ್ಬಂಧ ಸಮಿತಿಯ ವಿಶ್ಲೇಷಣಾತ್ಮಕ ಬೆಂಬಲ ಮತ್ತು ನಿರ್ಬಂಧ ಮೇಲುಸ್ತುವಾರಿ ತಂಡದ 14ನೇ ವರದಿ ಹೇಳಿದೆ.
ಸರಕಾರದ ಸ್ಥಾನಗಳಿಗಾಗಿ ಸ್ಪರ್ಧೆ, ಆರ್ಥಿಕ ಮತ್ತು ಪ್ರಾಕೃತಿಕ ಸಂಪನ್ಮೂಲಗಳ ನಿಯಂತ್ರಣಕ್ಕಾಗಿ ಸ್ಪರ್ಧೆ, ವಾಣಿಜ್ಯ ಸರಕುಗಳ ಕಳ್ಳಸಾಗಣೆ ಮಾರ್ಗಗಳ ನಿಯಂತ್ರಣಕ್ಕಾಗಿ ಸ್ಪರ್ಧೆ ತೀವ್ರಗೊಂಡಿದೆ. ಹಖಾನಿ ‘ಟ್ಯಾಪಿ’ ಗ್ಯಾಸ್ ಪೈಪ್ಲೈನ್ ಮೇಲೆ ಕಣ್ಣಿಟ್ಟಿದ್ದಾರೆ. ತುರ್ಕ್ಮೆನಿಸ್ತಾನದಿಂದ ಆರಂಭವಾಗುವ 1,814 ಕಿ.ಮೀ ಉದ್ದದ ಪ್ರಾಕೃತಿಕ ಅನಿಲ ಯೋಜನೆಯು ಅಫ್ಘಾನಿಸ್ತಾನ, ಪಾಕಿಸ್ತಾನದ ಮೂಲಕ ಭಾರತಕ್ಕೆ ತಲುಪುತ್ತದೆ. ಇದರ ಅಫ್ಘಾನ್ ವಿಭಾಗವನ್ನು ನಿಯಂತ್ರಣಕ್ಕೆ ಪಡೆಯುವುದು ಹಖಾನಿ ಉದ್ದೇಶವಾಗಿದೆ ಎಂದು ವರದಿ ಹೇಳಿದೆ.







