ರೈತರ ಪ್ರತಿಭಟನೆ ವೇಳೆ ಭಾರತದ ಸರಕಾರದಿಂದ ಒತ್ತಡ, ದಾಳಿ ಬೆದರಿಕೆ: ಟ್ವಿಟರ್ ನ ಮಾಜಿ ಸಿಇಒ ಜಾಕ್ ಡೋರ್ಸಿ ಆರೋಪ

ಹೊಸದಿಲ್ಲಿ: ರೈತರ ಪ್ರತಿಭಟನೆಗಳು ಹಾಗೂ ಕೇಂದ್ರವನ್ನು ಟೀಕಿಸುವ ಪತ್ರಕರ್ತರಿಗೆ ಸಂಬಂಧಿಸಿದಂತೆ ಭಾರತ ಸರಕಾರ ಟ್ವಿಟರ್‌ಗೆ ಹಲವಾರು ವಿನಂತಿಗಳನ್ನು ಮಾಡಿದೆ. ಆ ನಂತರ ಒತ್ತಡ ಹೇರಲಾಯಿತು ಹಾಗೂ ಟ್ವಿಟರ್ ಉದ್ಯೋಗಿಗಳ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಲಾಯಿತು ಎಂದು ಟ್ವಿಟರ್ ನ ಮಾಜಿ ಸಿಇಒ ಜಾಕ್ ಡೋರ್ಸಿ ಆರೋಪಿಸಿದ್ದಾರೆ.
ಜೂನ್ 12 ರಂದು ಡೋರ್ಸಿ ಅವರು ಯೂಟ್ಯೂಬ್ ಚಾನೆಲ್ ಬ್ರೇಕಿಂಗ್ ಪಾಯಿಂಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ಈ ಆರೋಪಗಳನ್ನು ಮಾಡಿದರು.
ಟ್ವಿಟರ್‌ನ ಸಿಇಒ ಆಗಿದ್ದ ಸಮಯದಲ್ಲಿ ವಿದೇಶಿ ಸರಕಾರಗಳಿಂದ ಎದುರಿಸಿದ ಒತ್ತಡಗಳ ಬಗ್ಗೆ ಡೋರ್ಸಿ ಅವರನ್ನು ಸಂದರ್ಶನದಲ್ಲಿ ಪ್ರಶ್ನಿಸಲಾಯಿತು.
ರೈತರ ಪ್ರತಿಭಟನೆಯ ಕುರಿತು, ಸರಕಾರವನ್ನು ಟೀಕಿಸುವ ನಿರ್ದಿಷ್ಟ ಪತ್ರಕರ್ತರಿಗೆ ಸಂಬಂಧಿಸಿ ಭಾರತದಿಂದ ನಮಗೆ ಅನೇಕ ಬೇಡಿಕೆಗಳನ್ನು ಬಂದಿದೆ. ನಮಗೆ ಬಹಳ ದೊಡ್ಡ ಮಾರುಕಟ್ಟೆಯಾಗಿರುವ ಭಾರತದಲ್ಲಿ ಟ್ವಿಟರ್ ಅನ್ನು ನಾವು ಮುಚ್ಚುತ್ತೇವೆಯೋ ಎಂಬ ಭಾವನೆ ನಮಗೆ ಬಂದಿತ್ತು. ನಾವು ನಿಮ್ಮ ಉದ್ಯೋಗಿಗಳ ಮನೆಗಳ ಮೇಲೆ ದಾಳಿ ಮಾಡುತ್ತೇವೆ ಎಂದು ಬೆದರಿಸಿದರು. ದಾಳಿ ಕೂಡಾ ಮಾಡಿದ್ದಾರೆ. ನೀವು ನಮ್ಮ ಸೂಚನೆಗಳನ್ನು ಪಾಲಿಸದಿದ್ದರೆ ನಾವು ನಿಮ್ಮ ಕಚೇರಿಗಳನ್ನು ಮುಚ್ಚುತ್ತೇವೆ ಎಂದು ಬೆದರಿಸಲಾಗಿತ್ತು.ಇದು ಭಾರತ, ಪ್ರಜಾಪ್ರಭುತ್ವ ದೇಶ ಎಂದು ಡೋರ್ಸಿ ಹೇಳಿದರು.
ಟರ್ಕಿ ಸೇರಿದಂತೆ ಇತರ ದೇಶಗಳಲ್ಲಿ ಆಗಿರುವ ತನ್ನ ಅನುಭವವನ್ನು ಹಂಚಿಕೊಂಡ ಅವರು ಭಾರತವನ್ನು ಟರ್ಕಿಗೆ ಹೋಲಿಸಿದರು. ಟರ್ಕಿ ಕೂಡ ಭಾರತದಂತೆಯೇ ಇತ್ತು ಎಂದರು.
ಕೇಂದ್ರ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಟ್ವಿಟರ್ ನ ಮಾಜಿ ಸಿಇಒ ಹೇಳಿಕೆಯನ್ನು ನಿರಾಕರಿಸಿದ್ದಾರೆ ಮತ್ತು ಇದು ಸಂಪೂರ್ಣ ಸುಳ್ಳು ಎಂದು ಹೇಳಿದ್ದಾರೆ.
ಡೋರ್ಸಿ ಅವರು ಆರೋಪಿಸಿದಂತೆ ಯಾರ ಮೇಲೂ ದಾಳಿ ಮಾಡಿಲ್ಲ ಅಥವಾ ಯಾರನ್ನೂ ಜೈಲಿಗೆ ಕಳುಹಿಸಲಾಗಿಲ್ಲ. ಯಾರೂ ಜೈಲಿಗೆ ಹೋಗಲಿಲ್ಲ ಅಥವಾ ಟ್ವಿಟರ್ ಸ್ಥಗಿತಗೊಳಿಸಲಿಲ್ಲ. ಡೋರ್ಸಿಯವರ ಆರೋಪಗಳು "ಟ್ವಿಟ್ಟರ್ ಇತಿಹಾಸದ ಅತ್ಯಂತ ಸಂಶಯಾಸ್ಪದ ಅವಧಿಯನ್ನು ಹೊರಹಾಕುವ ಪ್ರಯತ್ನ"ವಾಗಿದೆ ಎಂದರು.
"ನಮ್ಮ ಗಮನವು ಭಾರತೀಯ ಕಾನೂನುಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವುದರ ಮೇಲೆ ಮಾತ್ರ ಇತ್ತು. ಡೋರ್ಸಿಯ ನಾಯಕತ್ವದಲ್ಲಿ ಟ್ವಿಟರ್ ಭಾರತೀಯ ಕಾನೂನನ್ನು ಪದೇ ಪದೇ ಉಲ್ಲಂಘಿಸಿದೆ. ವಾಸ್ತವವಾಗಿ ಅವರು 2020 ರಿಂದ 2022 ರವರೆಗೆ ಪದೇ ಪದೇ ಕಾನೂನನ್ನು ಅನುಸರಿಸಲಿಲ್ಲ ಹಾಗೂ ಅಂತಿಮವಾಗಿ ಜೂನ್ 2022 ಮಾತ್ರ ಕಾನೂನು ಪಾಲಿಸಿದರು’’ ಎಂದರು.
ಡೋರ್ಸಿ ಅವರ ಟ್ವಿಟರ್ ಆಡಳಿತವು ಭಾರತೀಯ ಕಾನೂನಿನ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳುವಲ್ಲಿ ಸಮಸ್ಯೆ ಎದುರಿಸುತ್ತಿತ್ತು. ಭಾರತೀಯ ಕಾನೂನುಗಳು ನಮಗೆ ಅನ್ವಯಿಸುವುದಿಲ್ಲ ಎಂಬಂತೆ ವರ್ತಿಸಿದರು ಎಂದು ಚಂದ್ರಶೇಖರ್ ಹೇಳಿದರು.
2021 ರ ಜನವರಿಯಲ್ಲಿ ರೈತರ ಪ್ರತಿಭಟನೆಯ ಸಮಯದಲ್ಲಿ "ಹಲವಾರು ತಪ್ಪು ಮಾಹಿತಿಗಳು ಹರಡಲಾಗಿತ್ತು. ನರಮೇಧದ ವರದಿಗಳು ಖಚಿತವಾಗಿ ನಕಲಿಯಾಗಿದ್ದವು" ಎಂದು ಚಂದ್ರಶೇಖರ್ ಹೇಳಿದರು.