ದ.ಕ ಜಿಲ್ಲೆಯಲ್ಲಿ ದುಬಾರಿಯಾದ ಕೋಳಿ ಮಾಂಸ
►ಕೆ.ಜಿ ಗೆ 190 ರೂ. ತಲುಪಿದ ದರ ►ಮಳೆಯಾಗದಿದ್ದರೆ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ

ಸುರತ್ಕಲ್: ದ.ಕ. ಜಿಲ್ಲೆಯ ಮಾರುಕಟ್ಟೆ ಅಂಗಡಿಗಳಲ್ಲಿ ಬ್ರಾಯ್ಲರ್ ಕೋಳಿ ಕೆ.ಜಿ.ಗೆ 190 ರೂ. ಗೆ ಮಾರಾಟವಾಗುತ್ತಿದ್ದು, 2022-23ನೇ ಆರ್ಥಿಕ ವರ್ಷದಲ್ಲಿ ಅತೀ ಹೆಚ್ಚಿನ ದರ ಏರಿಕೆಯಾಗಿದೆ ಎಂದು ಕೋಳಿ ಮಾರಾಟಗಾರರ ಕರಾವಳಿ ಚಿಕನ್ ಟ್ರೇಡರ್ ಅಸೋಸಿಯೇಶನ್ ಹೇಳಿದೆ.
ಸದ್ಯ ಮಾರುಕಟ್ಟೆಯಲ್ಲಿ ಬ್ರಾಯ್ಲರ್ ಕೋಳಿಯ ಬೆಲೆ ಕೆ.ಜಿ.ಗೆ 190 ರೂ. ಇದ್ದರೆ, ಟೈಸನ್ ಕೆ.ಜಿ.ಗೆ 160 ರೂ., ಚರ್ಮ ಸಹಿತ ಕೋಳಿ ಮಾಂಸ 270 ರೂ. ಮತ್ತು ಚರ್ಮ ರಹಿತ ಕೋಳಿ ಮಾಂಸ 290 ರೂ.ಗೆ ಮಾರಾಟ ಮಾಡಲಾಗುತ್ತಿದೆ.
ಈ 2022-23ನೇ ಆರ್ಥಿಕ ಸಾಲಿನಲ್ಲಿ ಸದ್ಯ ಅತ್ಯಧಿಕ ದರದಲ್ಲಿ ಕೋಳಿ ಮಾರಾಟ ನಡೆಯುತ್ತಿದ್ದು, ಇದಕ್ಕೆ ಕೆಲವೊಂದು ಕಾರಣಗಳನ್ನು ಮಾರಾಟಗಾರರೇ ಹೇಳುತ್ತಾರೆ. ಈ ಬಾರಿ ಮಳೆಗಾಲ ಆಗಮನ ಪಡವಾಗಿರುವ ಕಾರಣ ಕುಕ್ಕುಟೋದ್ಯಮಿಗಳು ಹೆಚ್ಚು ಕೋಳಿಗಳನ್ನು ಸಾಕಲು ಹಿಂದೇಟು ಹಾಕಿತ್ತಿದ್ದಾರೆ. ಸುಡು ಬೇಸಿಗೆ ಹಾಗೂ ನೀರಿನ ಕೊರತೆಯ ಕಾರಣ 600-700 ಮರಿಗಳನ್ನು ಬೆಳೆಸಿದರೆ, ಮಾರಾಟಕ್ಕೆ ಸಿಗುವುದು ಕೇವಲ 200-250 ಕೋಳಿಗಳು ಮಾತ್ರ. ಉಳಿದವು ಬೆಳವಣಿಗೆಯ ಹಂತದಲ್ಲೇ ಸಾಯುತ್ತವೆ ಎನ್ನುತ್ತಾರೆ ಕರಾವಳಿ ಚಿಕನ್ ಟ್ರೇಡರ್ ಅಸೋಸಿಯೇಶನ್ ಅಧ್ಯಕ್ಷ ಹಾಗೂ ಲಬೈಕ್ ಚಿಕನ್ ನ ಮಾಲಕ ಬಶೀರ್.
ಜಿಲ್ಲೆಗೆ ಶಿವಮೊಗ್ಗ, ತೀರ್ಥಹಳ್ಳಿಯಿಂದ ಹೆಚ್ಚಿನ ಕೋಳಿಗಳು ಸರಬರಾಜಾಗುತ್ತಿದ್ದರು. ಆದರೆ, ಈ ಬಾರಿಯ ಸುಡು ಬಿಸಿಲಿನಿಂದಾಗಿ ಅಲ್ಲಿನ ಶೇ.60 ಕೋಳಿ ಸಾಕಣೆ ಕೇಂದ್ರಗಳು ಮುಚ್ಚಲ್ಪಟ್ಟಿವೆ. ಹಾಗಾಗಿ ಕೋಳಿಯ ಬೆಲೆ ಗಗನಕ್ಕೇರುವಂತಾಗಿದೆ. ಜೊತೆಗೆ ಸುಡು ಬಿಲಿನಿಂದಾಗಿ ನೀರಿನ ಪೂರೈಕೆ ಇಲ್ಲದಿರುವುದರಿಂದಲೂ ಈ ವರ್ಷ ಕೊಳೆಯ ಬೆಲೆ ಏರಿಕೆಯಾಗಲು ಮುಖ್ಯಕಾರಣ ಎನ್ನುತ್ತಾರೆ ಬಶೀರ್.
ಈಗಾಗಲೇ ಕರಾವಳಿಯಾದ್ಯಂತ ಮಳೆ ಆರಂಭಗೊಂಡಿದ್ದು, ಉತ್ತರ ಕನ್ನಡದ ಹಲವು ಕಡೆಗಳಲ್ಲಿ ಇನ್ನೂ ಮಳೆರಾಯನ ಆಗಮನವಾಗಿಲ್ಲ. ಒಂದು ವೇಳೆ ನಿರೀಕ್ಷಿತ ಮಟ್ಟದ ಮಳೆಯಾದರೆ, ಈ ತಿಂಗಳಾಂತ್ಯಕ್ಕೆ ಕೋಳಿ ದರ ಸಾಧಾರಣ ಮಟ್ಟಕ್ಕೆ ಇಳಿಕೆಯಾಗಲಿದೆ. ಇಲ್ಲವಾದರೆ ದರ ಇನ್ನೂ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಕೋಳಿ ಸಾಕಣೆದಾರರು ಹೇಳುತ್ತಾರೆ.
ಬೇಕಾದಷ್ಟು ಪ್ರಮಾಣದಲ್ಲಿ ಕೋಳಿಗಳ ಸರಬರಾಜು ಅಗುತ್ತಿಲ್ಲ. ಜೊತೆಗೆ ಹೆಚ್ಚು ಕೋಳಿಗಳನ್ನು ತಂದಿಟ್ಟರೆ ಬಿಸಿಲಿನ ಬೇಗೆಗೆ ಕೋಳಿಗಳು ಸಾಯುತ್ತವೆ. ಇದರಿಂದ ಲಾಭಕ್ಕಿಂತಲೂ ನಷ್ಟವೇ ಹೆಚ್ಚು. ಹಾಗಾಗಿ ಅಂಗಡಿಗೆ ಹೆಚ್ಚು ಕೋಳಿ ಹಾಕಿಸಿ ಕೈಸುಟ್ಟುಕೊಳ್ಳುವುದು ಬೇಡ ಎಂಬ ನೆಲೆಯಲ್ಲಿ ನಿಯಮಿತವಾಗಿ ತರಿಸಿಕೊಳ್ಳುತ್ತಿದ್ದೇವೆ.
-ಅಹ್ಮದ್ ಕಬೀರ್ ಹಳೆಯಂಗಡಿ, ಕೋಳಿ ಅಂಗಡಿ ಮಾಲಕ, ಬೈಕಂಪಾಡಿ
ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ಕೋಳಿಗೆ ಇಷ್ಟೊಂದು ದರ ಏರಿಕೆಯಾಗಿದೆ. ಪ್ರತಿ ವಾರಂತ್ಯ ಮನೆಯಲ್ಲಿ ಕೋಳಿ ಸಾರು ಮಾಡುವುದು ರೂಢಿ. ಆದರೆ, ದಿನದ ಸಂಬಳದ ಅರ್ಧ ಪಾಲು ಕೋಳಿಗೆ ನೀಡಲು ಬೇಸರವಾಗುತ್ತದೆ. ಅದಕ್ಕೆ ತರಕಾರಿ ಮತ್ತು ಮೀನು ತಿನ್ನಲು ಆರಂಭಿಸಿದ್ದೇವೆ.
-ಲಾವಣ್ಯಾ ಸುರತ್ಕಲ್, ಗ್ರಾಹಕಿ







