ಜನಾರ್ದನ ರೆಡ್ಡಿ, ಪತ್ನಿ ಲಕ್ಷ್ಮೀ ಅರುಣಾಗೆ ಸೇರಿದ ಆಸ್ತಿ ಜಪ್ತಿಗೆ ಸಿಬಿಐಗೆ ಅನುಮತಿ ನೀಡಿದ ಕೋರ್ಟ್

ಬೆಂಗಳೂರು, ಜೂ.13: ಅಕ್ರಮವಾಗಿ ಅದಿರು ಮಾರಾಟ ಮತ್ತು ರಫ್ತು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಜನಾರ್ದನರೆಡ್ಡಿ ಅವರ ಕುಟುಂಬದ ಸದಸ್ಯರಿಗೆ ಸೇರಿದ ಆಸ್ತಿಯನ್ನು ಜಪ್ತಿ ಮಾಡುವಂತೆ ನಗರದ ಜನಪ್ರತಿನಿಧಿಗಳ ಕೋರ್ಟ್ ಆದೇಶಿಸಿದೆ.
ಈ ಸಂಬಂಧ ಸಿಬಿಐ ದಾಖಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಪೀಠವು ವಿಚಾರಣೆ ನಡೆಸಿ ಆದೇಶ ನೀಡಿದ್ದು, ಜನಾರ್ದನರೆಡ್ಡಿ ಮತ್ತು ಅವರ ಪತ್ನಿ ಲಕ್ಷ್ಮೀ ಅರುಣಾ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ಮುಗಿಯುವವರೆಗೆ ಅವರ ಹೆಸರಿನಲ್ಲಿರುವ 77 ಆಸ್ತಿಗಳನ್ನು ಜಪ್ತಿ ಮಾಡುವಂತೆ ಆದೇಶಿಸಿದೆ.
ಪ್ರಕರಣದಲ್ಲಿ ಜನಾರ್ದನರೆಡಿ ಸೇರಿ 21 ಜನ ಆರೋಪಿಗಳಿದ್ದು, 6.05 ಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರಿನ ಅಕ್ರಮ ಮಾರಾಟ ಮತ್ತು ರಫ್ತಿಗೆ ಸಂಬಂಧಿಸಿದಂತೆ ಪ್ರತಿವಾದಿಗಳು ಸರಕಾರದ ಬೊಕ್ಕಸಕ್ಕೆ 198 ಕೋಟಿ ನಷ್ಟ ಉಂಟು ಮಾಡಿದ್ದಾರೆ ಎಂದು ಸಿಬಿಐ ಪರ ವಕೀಲರು ಪೀಠಕ್ಕೆ ತಿಳಿಸಿದ್ದರು.
ಸಿಬಿಐ ಲಗತ್ತಿಸಲು ಕೋರಿರುವ ಆಸ್ತಿಗಳು 65.05 ಕೋಟಿಗಳ ಮೌಲ್ಯ ಹೊಂದಿವೆ. ಆದರೆ, ಅಪರಾಧದ ಆದಾಯವನ್ನು ಪ್ರತಿವಾದಿಯು ತಮ್ಮ ಹೆಸರಿನಲ್ಲಿ ಮತ್ತು ಪತ್ನಿಯ ಕಂಪೆನಿಗಳ ಹೆಸರಿನಲ್ಲಿ ಸಂಪಾದಿಸಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.







