ಹಿರಿಯ ಪತ್ರಕರ್ತ ಹಾಡುಪಾಡು ರಾಮು ಹೃದಯಾಘಾತದಿಂದ ನಿಧನ

ಮೈಸೂರು: ಹಾಡುಪಾಡು ರಾಮು ಎಂದೇ ಜನಪ್ರಿಯರಾಗಿದ್ದ ಹಿರಿಯ ಪತ್ರಕರ್ತ ಟಿ.ಎಸ್.ರಾಮಸ್ವಾಮಿ (69) ಅವರು ಮಂಗಳವಾರ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ.
ನಗರದ ಸರಸ್ವತಿಪುರಂ ನ. 9 ನೇ ಕ್ರಾಸ್ ನಲ್ಲಿರುವ ಅವರ ಸ್ವಗೃಹದಲ್ಲಿ ಮಂಗಳವಾರ ಬರಳಿಗನ ಜಾವ 3.20 ರಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಮೈಸೂರಿನ ಸ್ಥಳೀಯ ದಿನಪತ್ರಿಕೆಯ ರವಿವಾರದ ಹಾಡುಪಾಡು ಸಂಚಿಕೆಗೆ ಮೂಲ ಕಾರಣಕರ್ತರಾಗಿದ್ದರು ಹಾಗಾಗಿ ಅವರು ಹಾಡುಪಾಡು ರಾಮು ಎಂದೇ ಚಿರಪರಿಚಿತರಾಗಿದ್ದರು.
ಹಿರಿಯ ಸಾಹಿತಿ ದೇವನೂರ ಮಹಾದೇವ ಅವರಿಗೆ ಅತ್ಯಾಪ್ತರಾಗಿದ್ದರು.
ಮೃತರು ಸೋದರಿ ರಾಜಲಕ್ಷ್ಮಿ, ಸೋದರ ಟಿ.ಎಸ್.ವೇಣುಗೋಪಾಲ್, ನಾದಿನಿ ಶೈಲಜಾ, ಸೋದರಿಯ ಪತಿ ಡಾ.ಎಸ್.ತುಕಾರಾಮ್, ಮತ್ತೊಬ್ಬ ಸೋದರಿ ದಿ.ಕುಮುದವಲ್ಲಿ ಅವರ ಪತಿ ರಾಘವೇಂದ್ರ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
ಅವಿವಾಹಿತರಾಗಿದ್ದ ರಾಮು ಅವರು, ಪತ್ರಿಕಾರಂಗದಲ್ಲಿ ಪ್ರಾಮಾಣಿಕತೆಗೆ ಮಾದರಿಯಾಗಿದ್ದರು. ನೊಂದವರು, ಬಡವರ ಏಳಿಗೆಗೆ ಪತ್ರಿಕೆಗಳು ಸ್ಪಂದಿಸಬೇಕಾದ ಬಗೆಯನ್ನು ಪ್ರತಿಕ್ಷಣ ಚಿಂತಿಸುತ್ತಿದ್ದರು. ಯುವ ಪತ್ರಕರ್ತರಿಗೆ ಮಾರ್ಗದರ್ಶನ ನೀಡುತ್ತಿದ್ದರು. ರಾಮು ಅವರ ಗರಡಿಯಲ್ಲಿ ಪಳಗಿದ ದೊಡ್ಡ ಸಂಖ್ಯೆಯ ಪತ್ರಕರ್ತರು ಮೈಸೂರು ಸೇರಿದಂತೆ ರಾಜ್ಯಾದ್ಯಂತ ಇದ್ದಾರೆ.
ರಾಮಸ್ವಾಮಿ ಅವರು ಕವಿಯೂ ಆಗಿದ್ದು, ಅಗ್ನಿಸೂಕ್ತ ಮತ್ತು ರಾಮು ಕವಿತೆಗಳು ಎಂಬ ಕವನ ಸಂಕಲನಗಳನ್ನು ಬರೆದಿದ್ದಾರೆ.
ಅಂತಿಮ ದರ್ಶನ: ಇಂದು ಮಧ್ಯಾಹ್ನ 1 ಗಂಟೆವರೆಗೆ ರಾಮಸ್ವಾಮಿ ಅವರ ಮೃತದೇಹವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ನಂತರ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಹರಿಶ್ಚಂದ್ರ ಘಾಟ್ ಸ್ಮಶಾನದ ಅನಿಲ ಚಿತಾಗಾರದಲ್ಲಿ ರಾಮಸ್ವಾಮಿ ಅವರ ಮೃತದೇಹದ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಿಎಂ ಸಿದ್ದರಾಮಯ್ಯ ಸಂತಾಪ: 'ರಾಮೂ ಎಂದೇ ಜನಪ್ರಿಯರಾಗಿದ್ದ ಪತ್ರಕರ್ತ ಹಾಗೂ ಕವಿ ಟಿ.ಎಸ್.ರಾಮಸ್ವಾಮಿ ಅವರ ಅನಿರೀಕ್ಷಿತ ಸಾವು ನನ್ನನ್ನು ಆಘಾತಕ್ಕೀಡು ಮಾಡಿದೆ. ಮೈಸೂರಿನ ಸಾಹಿತ್ಯ, ಸಾಂಸ್ಕೃತಿಕ ಮತ್ತು ಮಾಧ್ಯಮ ಕ್ಷೇತ್ರ ರಾಮು ಅವರ ಅಗಲಿಕೆಯಿಂದ ಬಡವಾಗಿದೆ'
'ಹಲವಾರು ಬರಹಗಾರರು ಮತ್ತು ಪತ್ರಕರ್ತರನ್ನು ಸಲುಹಿ ಬೆಳೆಸಿದ್ದ ರಾಮು ನನಗೂ ಆತ್ಮೀಯ ಸ್ನೇಹಿತರಾಗಿದ್ದರು. ರಾಮು ಅವರ ಸಾವಿನಿಂದ ನೊಂದಿರುವ ಅವತ ಕುಟುಂಬ ವರ್ಗ ಹಾಗೂ ಗೆಳೆಯರ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ' ಎಂದು ಟ್ವೀಟ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.
ರಾಮೂ ಎಂದೇ ಜನಪ್ರಿಯರಾಗಿದ್ದ ಪತ್ರಕರ್ತ ಮತ್ತು ಕವಿ ಟಿ.ಎಸ್.ರಾಮಸ್ವಾಮಿ ಅವರ ಅನಿರೀಕ್ಷಿತ ಸಾವು ನನ್ನನ್ನು ಆಘಾತಕ್ಕೀಡು ಮಾಡಿದೆ.
— CM of Karnataka (@CMofKarnataka) June 13, 2023
ಮೈಸೂರಿನ ಸಾಹಿತ್ಯ, ಸಾಂಸ್ಕೃತಿಕ ಮತ್ತು ಮಾಧ್ಯಮ ಕ್ಷೇತ್ರ ರಾಮು ಅವರ ಅಗಲಿಕೆಯಿಂದ ಬಡವಾಗಿದೆ.
ಹಲವಾರು ಬರಹಗಾರರು ಮತ್ತು ಪತ್ರಕರ್ತರನ್ನು ಸಲಹಿ ಬೆಳೆಸಿದ್ದ ರಾಮು ನನಗೂ ಆತ್ಮೀಯ ಸ್ನೇಹಿತರಾಗಿದ್ದರು.… pic.twitter.com/TFBvLsS5tK







