ಅಣ್ಣಾಮಲೈ ವಿರುದ್ಧ ನಿರ್ಣಯ ಅಂಗೀಕರಿಸಿದ ಎಐಎಡಿಎಂಕೆ

ಚೆನ್ನೈ: ತಮಿಳುನಾಡು ವಿರೋಧ ಪಕ್ಷ ಎಐಎಡಿಎಂಕೆ ಐಕಾನ್ ಹಾಗೂ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ರಾಜ್ಯ ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ ಅವರ ಬಗ್ಗೆ ಬೇಸರಗೊಂಡಿರುವ ಪಕ್ಷವು ಅವರನ್ನು "ಅನನುಭವಿ, ಬೇಜವಾಬ್ದಾರಿ ಹಾಗೂ ಪ್ರೇರಿತ" ಎಂದು ಕರೆಯುವ ನಿರ್ಣಯವನ್ನು ಇಂದು ಅಂಗೀಕರಿಸಿದೆ.
ಅಣ್ಣಾಮಲೈ ಅವರು ರಾಜೀನಾಮೆ ನೀಡದಿದ್ದರೆ ಮಿತ್ರ ಪಕ್ಷವಾದ ಬಿಜೆಪಿ ಜೊತೆಗಿನ ಸಂಬಂಧವನ್ನು ಪರಿಶೀಲಿಸುವುದಾಗಿ ಎಐಎಡಿಎಂಕೆ ನಿನ್ನೆ ಬೆದರಿಕೆ ಹಾಕಿತ್ತು.
ಜಯಲಲಿತಾ ಅವರ ಕುರಿತಾದ ಅಣ್ಣಾಮಲೈ ಅವರ ಸಂದರ್ಶನವು ಎಐಎಡಿಎಂಕೆ ಕಾರ್ಯಕರ್ತರಿಗೆ ನೋವುಂಟು ಮಾಡಿದೆ, 1998 ರಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬರಲು ಅಪ್ರತಿಮ ನಾಯಕಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.
ಮಿತ್ರಪಕ್ಷ ಬಿಜೆಪಿ ಜೊತೆಗಿನ ಘರ್ಷಣೆಯ ನಡುವೆಯೇ ಎಐಎಡಿಎಂಕೆ ಜಿಲ್ಲಾ ಕಾರ್ಯದರ್ಶಿಗಳ ಸಭೆ ಇಂದು ಬೆಳಗ್ಗೆ ಆರಂಭವಾಗಿದೆ. ಹೊಸ ಸದಸ್ಯತ್ವ ದಾಖಲಾತಿ ಕುರಿತು ಚರ್ಚಿಸಲು ಸಭೆ ಕರೆಯಲಾಗಿದ್ದರೂ, ಕೆ.ಅಣ್ಣಾಮಲೈ ಅವರ ಟೀಕೆಯನ್ನೂ ಅದು ತರಾಟೆಗೆ ತೆಗೆದುಕೊಂಡಿತು.
ಮೈತ್ರಿಯನ್ನು ಪರಿಶೀಲಿಸುವುದಾಗಿ ಬೆದರಿಕೆ ಹಾಕಿದ್ದ ಎಐಎಡಿಎಂಕೆಯ ಹಿರಿಯ ನಾಯಕ ಡಿ. ಜಯಕುಮಾರ್‌ಗೆ ನಿನ್ನೆ ಬಿಜೆಪಿ ಕೂಡ ತಿರುಗೇಟು ನೀಡಿದ್ದು, "ಮೈತ್ರಿಯಲ್ಲಿ ದೊಡ್ಡಣ್ಣನಿಲ್ಲ" ಎಂದು ಹೇಳಿದೆ.
ಅಣ್ಣಾಮಲೈ ಅವರು ಪಕ್ಷದ ರಾಜ್ಯಾಧ್ಯಕ್ಷರಾಗಲು ಅರ್ಹರಲ್ಲ, ತಮ್ಮ ಮಾತಿನ ಬಗ್ತೆ ಎಚ್ಚರದಲ್ಲಿರಬೇಕು. ಮೈತ್ರಿ ಮುಂದುವರೆಯುವುದು ಅಥವಾ ಪ್ರಧಾನಿ ಮೋದಿ ಮತ್ತೆ ಗೆಲ್ಲುವುದು ಅವರಿಗೆ ಇಷ್ಟವಿಲ್ಲ ಎಂಬ ಅನುಮಾನ ನಮಗಿದೆ ಎಂದು ಡಿ ಜಯಕುಮಾರ್ ಹೇಳಿದ್ದರು.







