ಉಡುಪಿ ಜಿಲ್ಲೆಯಲ್ಲಿ ಇನ್ನೂ ಚುರುಕುಗೊಳ್ಳದ ಮುಂಗಾರು

ಉಡುಪಿ, ಜೂ.13: ಎಪ್ರಿಲ್- ಮೇ ತಿಂಗಳ ಮುಂಗಾರು ಪೂರ್ವ ಸಂಪೂರ್ಣ ಕೈಕೊಟ್ಟ ಬಳಿಕ ಇದೀಗ ಮುಂಗಾರು ಮಳೆ ಸಹ ಜಿಲ್ಲೆಯ ಮೇಲೆ ಮುನಿಸುಗೊಂಡಿರುವಂತೆ ಕಾಣುತಿದ್ದು, ಜಿಲ್ಲೆಯ ರೈತರು ಇದರಿಂದ ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸಲಾಗದೇ ಆತಂಕಿತರಾಗಿದ್ದಾರೆ.
ಸಾಮಾನ್ಯವಾಗಿ ಜೂನ್ ತಿಂಗಳ ಪ್ರಾರಂಭದಲ್ಲಿ ಮುಂಗಾರು ಜಿಲ್ಲೆಗೆ ಪ್ರವೇಶಿಸಿ, ನಿರಂತರ ಮಳೆಯಿಂದ ಕೃಷಿ ಚಟುವಟಿಕೆ ಬಿರುಸು ಪಡೆಯುತಿತ್ತು. ಇದೀಗ ಎರಡು ವಾರಗಳು ಕಳೆದರೂ ಜಿಲ್ಲೆಯಲ್ಲಿ ಇನ್ನೂ ಮುಂಗಾರು ಚುರುಕು ಪಡೆಯುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ವರ್ಷದ ಈ ವೇಳೆ ಪ್ರತಿದಿನ 10-15ಸೆ.ಮೀ. ಮಳೆ ಕಾಣಬೇಕಿದ್ದ ಜಿಲ್ಲೆಯಲ್ಲಿ ಈ ಬಾರಿ ಸರಾಸರಿ ಎರಡು ಸೆ.ಮೀ.ನಷ್ಟು ಮಾತ್ರ ಮಳೆಯಾಗುತ್ತಿದೆ.
ಮಂಗಳವಾರ ಮುಂಜಾನೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ ಕೇವಲ 6.9ಮಿ.ಮೀ.ನಷ್ಟು ಮಾತ್ರ ಮಳೆಯಾಗಿದೆ. ಬ್ರಹ್ಮಾವರದಲ್ಲಿ 13.7ಮಿ.ಮೀ, ಕುಂದಾಪುರದಲ್ಲಿ 9.4, ಕಾಪುವಲ್ಲಿ 6.8, ಹೆಬ್ರಿಯಲ್ಲಿ 6.1, ಉಡುಪಿಯಲ್ಲಿ 4.9, ಕಾರ್ಕಳದಲ್ಲಿ 4.1 ಹಾಗೂ ಬೈಂದೂರಿನಲ್ಲಿ 3.7ಮಿ.ಮೀ. ಮಳೆಯಾದ ಬಗ್ಗೆ ಮಾಹಿತಿ ಬಂದಿದೆ.
ಮನೆಗಳಿಗೆ ಹಾನಿ: ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಬೀಸಿದ ಗಾಳಿ- ಮಳೆಗೆ ಐದು ಮನೆಗಳಿಗೆ ಭಾಗಶ: ಹಾನಿಯಾಗಿದ್ದು, ಸುಮಾರು ಎರಡು ಲಕ್ಷ ರೂ.ಗಳಷ್ಟು ನಷ್ಟ ಸಂಭವಿಸಿದೆ. ಬ್ರಹ್ಮಾವರ ಕಚ್ಚೂರಿನಲ್ಲಿ ಜಗನ್ನಾಥ ಪೂಜಾರಿ ಎಂಬವರ ವಾಸ್ತವ್ಯದ ಮನೆ ಗಾಳಿ-ಮಳೆಯಿಂದ ಭಾಗಶ: ಕುಸಿದಿದ್ದು, ಸುಮಾರು ಒಂದು ಲಕ್ಷ ರೂ.ನಷ್ಟು ನಷ್ಟದ ಅಂದಾಜು ಮಾಡಲಾಗಿದೆ.
ಬ್ರಹ್ಮಾವರ ತಾಲೂಕು ಕೆಂಜೂರಿನ ನಾರಾಯಣ ಪೂಜಾರಿ ಎಂಬವರ ಮನೆಯ ಗೋಡೆಗೆ ಸಿಡಿಲು ಬಡಿದಿದ್ದು, ಅಪಾರ ಹಾನಿ ಸಂಭವಿಸಿದೆ. ಐರೋಡಿ ಗ್ರಾಮದ ವಿಕ್ಟರ್ ಡಿಸಿಲ್ವ ಎಂಬವರ ಮನೆಗೂ ನಿನ್ನೆ ಸಂಜೆ ಸಿಡಿಲು ಬಡಿದಿದ್ದು, ಮನೆಯಲ್ಲಿದ್ದ ಎಲೆಕ್ಟ್ರಾನಿಕ್ಸ್ ಹಾಗೂ ಇತರ ಉಪಕರಣಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ಕುಂದಾಪುರ ತಾಲೂಕಿನ ಕಟ್‌ಬೆಲ್ತೂರು ಗ್ರಾಮದ ರಾಧ ಎಂಬವರ ಮನೆಯೂ ಗಾಳಿ-ಮಳೆಗೆ ಭಾಗಶ: ಹಾನಿಯಾಗಿದ್ದು 20,000ರೂ. ಹಾಗೂ ಸಿದ್ಧಾಪುರ ಗ್ರಾಮದ ಕೊರಗ ಪೂಜಾರಿ ಎಂಬವರ ಮನೆಗೂ ಭಾಗಶ: ಹಾನಿಯಾಗಿ 30ಸಾವಿರ ರೂ.ಗಳಷ್ಟು ಹಾನಿ ಸಂಭವಿಸಿರುವ ಬಗ್ಗೆ ವರದಿ ಗಳು ಬಂದಿವೆ.
33 ಡಿಗ್ರಿ ಸೆ.ಗರಿಷ್ಠ ಉಷ್ಣಾಂಶ: ಜಿಲ್ಲೆಯಲ್ಲಿ ಮುಂದಿನ 48 ಗಂಟೆಗಳಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆ. ಇದ್ದರೆ, ಕನಿಷ್ಠ ಉಷ್ಣಾಂಶ 25 ಡಿಗ್ರಿ ಸೆ. ಇರಲಿದೆ. ಆದರೆ ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2-3ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಾಗಿರುವ ಸಾಧ್ಯತೆ ಇದೆ.
ಮುಂದಿನ ನಾಲ್ಕು ದಿನಗಳಲ್ಲಿ ಜಿಲ್ಲೆಯಲ್ಲಿ ಹಗುರದಿಂದ ಸಾಧಾರಣ ಮಳೆ ಸುರಿಯುವ ಮುನ್ಸೂಚನೆಯನ್ನು ನೀಡಲಾಗಿದೆ. ಕರಾವಳಿಯಲ್ಲಿ ಮುಂದಿನ 24 ಗಂಟೆಗಳಲ್ಲಿ ಗುಡುಗು ಸಿಡಿಲಿನ ಸಹಿತ ಬಿರುಗಾಳಿ ಬೀಸಲಿದ್ದು, ಗಾಳಿಯ ವೇಗವು ಗಂಟೆಗೆ 40ರಿಂದ 50ಕಿ.ಮೀ. ಇರಲಿದೆ. ಇದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.







