ಪ್ರೊ.ಎ.ವಿ.ನಾವಡರಿಗೆ 2023ರ ಸೇಡಿಯಾಪು ಪ್ರಶಸ್ತಿ

ಉಡುಪಿ, ಜೂ.13: ಹಿರಿಯ ಜಾನಪದ ವಿದ್ವಾಂಸ, ಸಂಶೋಧಕ ಹಾಗೂ ಸಾಹಿತಿ ಪ್ರೊ.ಎ.ವಿ.ನಾವಡ ಅವರನ್ನು 2023ನೇ ಸಾಲಿನ ಸೇಡಿಯಾಪು ಕೃಷ್ಣ ಭಟ್ಟ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಭಾಷೆ, ಸಾಹಿತ್ಯ, ವ್ಯಾಕರಣ, ಭಾಷಾ ಶಾಸ್ತ್ರ, ಕಥನ ಕಾವ್ಯ ಮತ್ತು ಸಂಶೋಧನ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿರುವ ಸೇಡಿಯಾಪು ಕೃಷ್ಣ ಭಟ್ಟರ ನೆನಪಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಡಾ.ಶೆಟ್ಟಿ ತಿಳಿಸಿದ್ದು, ಪ್ರಶಸ್ತಿಯು 10,000ರೂ. ನಗದು ಹಾಗೂ ಪ್ರಶಸ್ತಿ ಫಲಕವ ನ್ನೊಳಗೊಂಡಿರುತ್ತದೆ.
ಹಂಪಿ ಕನ್ನಡ ವಿವಿಯ ವಿಶ್ರಾಂತ ಪ್ರಾಧ್ಯಾಪಕ ಹಾಗೂ ಪ್ರಸಾರಾಂಗದ ಮಾಜಿ ನಿರ್ದೇಶಕರಾಗಿದ್ದ ಡಾ.ನಾವಡ, ಕುಂದಾಪುರದ ಭಂಡಾರ್‌ಕಾರ್ಸ್ ಕಾಲೇಜು ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಒಟ್ಟು 38 ವರ್ಷಗಳ ಭೋದನಾನುಭವ ಹೊಂದಿದ್ದಾರೆ. 1980ರಿಂದ ವಿವಿಧ ಸಂಶೋಧನಾ ಯೋಜನೆಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡು ಅಪಾರ ಸಂಶೋಧನ ಅನುಭವ ಹೊಂದಿದ್ದಾರೆ. ಹಂಪಿ ವಿವಿಯ ಪ್ರಸಾರಾಂಗದ ನಿರ್ದೇಶಕರಾಗಿ, ಡೀನ್ ಆಗಿ, ಸಿಂಡಿಕೇಟ್ ಸದಸ್ಯರಾಗಿ ಹಾಗೂ ಸೆನೆಟ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.
ಪ್ರೊ.ನಾವಡ ದಾಸಸಾಹಿತ್ಯ ಸಂಸ್ಕೃತಿ ವಿಶ್ವಕೋಶ, ದ್ರಾವಿಡ ಜ್ಞಾತಿ ಪದಕೋಶ, ಕನ್ನಡ ಇಂಗ್ಲಿಷ್ ಶಬ್ದಕೋಶ, ಕನಕ ಶಿಷ್ಟ ಪದಕೋಶ, ಬ್ಯಾರಿನಿಘಂಟು ಮುಂತಾದವುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ‘ಗ್ರಾಮ ಚರಿತ್ರಕೋಶ’ ಯೋಜನೆಯಲ್ಲಿ ಉಡುಪಿ ಜಿಲ್ಲಾ ಕೋಶದ ಪ್ರದಾನ ಸಂಪಾದಕರಾಗಿದ್ದಾರೆ.
ಪ್ರೊ. ನಾವಡ ಈವರೆಗೆ 30 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 29 ಗ್ರಂಥಗಳನ್ನು ಸಂಪಾದಿಸಿದ್ದಾರೆ. ಅಲ್ಲದೆ ಜಾನಪದ, ದಾಸ ಸಾಹಿತ್ಯ, ಹಸ್ತಪ್ರತಿ ಶಾಸ್ತ್ರಕ್ಕೆ ಸಂಬಂಧಿಸಿ ನೂರಾರು ಪ್ರೌಢ ಪ್ರಬಂಧಗಳನ್ನು ಮಂಡಿಸಿದ್ದಾರೆ.
ಇವರು ಪಿನ್‌ಲ್ಯಾಂಡಿನ ಪೋಕ್‌ಲೋರ್ ಸೊಸಾಟಿಯ ಫೆಲೊ ಗೌರವ, ಕು.ಶಿ.ಜಾನಪದ ಪ್ರಶಸ್ತಿ, ಕರ್ನಾಟಕ ತುಳು ಅಕಾಡೆಮಿ ಗೌರವ ಪ್ರಶಸ್ತಿ, ವರ್ಧಮಾನ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಕನಕಶ್ರೀ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.







