ಮಧ್ಯಪ್ರದೇಶ: ಪ್ರಮುಖ ಇಲಾಖೆಗಳ ದಾಖಲೆ ಇರುವ ಕಟ್ಟಡದಲ್ಲಿ ಅಗ್ನಿ ಅವಘಡ; ಹಲವು ಮಹತ್ವದ ದಾಖಲೆಗಳು ನಾಶ
ಕೋವಿಡ್ ಪಾವತಿ ಸೇರಿದಂತೆ ಸುಟ್ಟುಹೋದ 12,000 ಕ್ಕೂ ಅಧಿಕ ಪ್ರಮುಖ ಕಡತಗಳು

ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ನಲ್ಲಿರುವ ಸಾತ್ಪುರ ಭವನದಲ್ಲಿ ಸೋಮವಾರ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, 25 ಕೋಟಿ ರೂಪಾಯಿ ಮೌಲ್ಯದ ಪೀಠೋಪಕರಣಗಳು ಮತ್ತು 12,000 ಕ್ಕೂ ಹೆಚ್ಚು ಪ್ರಮುಖ ಕಡತಗಳು ಸುಟ್ಟುಹೋಗಿವೆ ಎಂದು ವರದಿಯಾಗಿವೆ.
ಅಗ್ನಿ ಅವಘಡದ ಹಿಂದೆ ಷಡ್ಯಂತ್ರವಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಬಿಜೆಪಿ ಸರ್ಕಾರವು ಯಾವುದೇ ಸೂಕ್ಷ್ಮ ಅಥವಾ ಮಹತ್ವದ ಕಡತಗಳು ಬೆಂಕಿಯಲ್ಲಿ ನಾಶವಾಗಿಲ್ಲ ಎಂದು ಪ್ರತಿಪಾದಿಸಿದೆ.
ಸಾತ್ಪುರ ಭವನದಲ್ಲಿ ಮಧ್ಯಪ್ರದೇಶ ಸರ್ಕಾರದ ಹಲವಾರು ಇಲಾಖೆಗಳ ಕಛೇರಿ ಕಾರ್ಯ ನಿರ್ವಹಿಸುತ್ತಿದೆ. ಸೋಮವಾರ ಮೂರನೇ ಮಹಡಿಯಲ್ಲಿ ಪ್ರಾರಂಭವಾದ ಬೆಂಕಿಯು ಕಟ್ಟಡದ ನಾಲ್ಕು, ಐದನೇ ಮತ್ತು ಆರನೇ ಮಹಡಿಗಳಿಗೆ ವ್ಯಾಪಿಸಿದೆ.
ಈ ವರ್ಷದ ಕೊನೆಯಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ ಸರ್ಕಾರದ ಪ್ರಮುಖ ಕಡತಗಳಿರುವ ಕಟ್ಟಡವು ಅಗ್ನಿಗಾಹುತಿಯಾಗಿರುವುದು ಹಲವು ಚರ್ಚೆಗೆ ಕಾರಣವಾಗಿದೆ.
ಕಳೆದ ಹತ್ತು ವರ್ಷಗಳಲ್ಲಿ ಇದು ಮೂರನೇ ಬಾರಿಗೆ ಸಾತ್ಪುರ ಭವನದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಕಾಕತಾಳೀಯವೆಂಬಂತೆ, 2012 ಮತ್ತು 2018 ರಲ್ಲಿ ಕೂಡಾ ವಿಧಾನಸಭಾ ಚುನಾವಣೆ ನಡೆಯುವ ಮುನ್ನವೇ ಅಗ್ನಿ ಅವಗಢ ನಡೆದಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ಕಟ್ಟಡದ ಮೂರನೇ ಮಹಡಿಯಲ್ಲಿರುವ ಬುಡಕಟ್ಟು ಕಲ್ಯಾಣ ಇಲಾಖೆಯ ಪ್ರಾದೇಶಿಕ ಕಚೇರಿಯಲ್ಲಿ ಸಂಜೆ 4 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಆದಾಗ್ಯೂ, ಪ್ರಾಥಮಿಕ ಮಾಹಿತಿಯು ಎಸಿಯಲ್ಲಿನ ತಾಂತ್ರಿಕ ದೋಷದಿಂದ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.
ಬುಡಕಟ್ಟು ವ್ಯವಹಾರಗಳು, ಆರೋಗ್ಯ, ಅರಣ್ಯ, ಸಾರ್ವಜನಿಕ ಕುಂದುಕೊರತೆಗಳು ಮತ್ತು ರಾಷ್ಟ್ರೀಯ ಮಾಹಿತಿ ವ್ಯವಸ್ಥೆ ಮುಂತಾದ ಇಲಾಖೆಗಳು ಸಾತ್ಪುರ ಭವನದ ಆರು ಮಹಡಿಗಳಲ್ಲಿ ಕಾರ್ಯನಿರ್ವಹಿಸುತ್ತವೆ. ವರದಿಗಳ ಪ್ರಕಾರ, ಕಟ್ಟಡದ ನಾಲ್ಕು ಮಹಡಿಗಳಲ್ಲಿದ್ದ ನೌಕರರ ಸೇವಾ ದಾಖಲೆಗಳು, ದೂರು ದಾಖಲೆಗಳು ಮತ್ತು ಬಜೆಟ್ ಲೆಕ್ಕಪತ್ರ ದಾಖಲೆಗಳು ಸುಟ್ಟು ಭಸ್ಮವಾಗಿವೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ದೂರುಗಳ ಶಾಖೆಯಲ್ಲಿ ದಾಖಲಾದ ದೂರುಗಳ ಕಡತಗಳು ಮತ್ತು ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಆಸ್ಪತ್ರೆಗಳಿಗೆ ಮಾಡಿದ ಪಾವತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಹ ನಾಶವಾಗಿದೆ ಎಂದು ವರದಿಯಾಗಿದೆ.







